ಗಂಗಾವತಿ : ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ ಆಯೋಜಿಸಿರುವ ನಮೂನೆಗಳ ಪರಿಶೀಲನೆ ಹಾಗೂ ಸ್ವೀಪ್ ಕಾರ್ಯಕ್ರಮಗಳ ಪರಿಶೀಲನೆ ಸಭೆ ಐಎಎಸ್ ನಿವೃತ್ತ ಹಾಗೂ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಪಿ.ಎಸ್. ಪ್ರಸಾದ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ನಂತರ ಅವರು ಮಾತನಾಡಿ, ಶಾಲಾ ಹಂತದಲ್ಲೇ ಚುನಾವಣೆ ಪ್ರಕ್ರಿಯೆ ಹಾಗೂ ಮತದಾನದ ಮಹತ್ವ, ಇವಿಎಂ ಮಷಿನ್ ಬಗ್ಗೆ ಶಿಕ್ಷಕರು ಮಾಹಿತಿ ನೀಡಬೇಕು.
ಮತದಾರರ ಪಟ್ಟಿ ಕಾಲಕಾಲಕ್ಕೆ ಶುದ್ಧೀಕರಣ ಆಗಬೇಕು. ಮರಣ ಹೊಂದಿದವರು ಹಾಗೂ ಬೇರೆ ಜಿಲ್ಲೆಗಳಿಗೆ ವಲಸೆ ಹೋದವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಡಿಲಿಟ್ ಮಾಡಿಸಬೇಕು ಎಂದರು.
18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಕ್ರಮವಹಿಸಬೇಕು. ವೋಟರ್ ಹೆಲ್ಪ್ ಲೈನ್ ಆ್ಯಪ್ ನಲ್ಲಿ ಸಹ ಹೆಸರು ನೋಂದಾಯಿಸಲು ಅವಕಾಶವಿದ್ದು ಈ ಬಗ್ಗೆ ಯುವ ಮತದಾರರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು ಎಂದರು.
ಮತದಾರರ ಪಟ್ಟಿಯ ಶುದ್ಧೀಕರಣ ಸರಿಯಾಗಿ ನಡೆದರೆ ಶೇ.100 ರಷ್ಟು ಮತದಾನ ಆಗಲು ಸಹಕಾರಿ ಆಗುತ್ತದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಯುವ ಮತದಾರರ ನೋಂದಣಿ ಮಾಡಲು
ಬಿಎಲ್ ಓಗಳು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಮತಗಟ್ಟೆಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲು ಗಮನ ಹರಿಸಬೇಕು ಎಂದರು.
ಕೊಪ್ಪಳ ತಾಲೂಕು ತಹಸೀಲ್ದಾರರಾದ ವಿಠ್ಠಲ್ ಚಾಗಲೆ, ಕೊಪ್ಪಳ ತಾಪಂ ಇಓ ದುಂಡಪ್ಪ ತುರಾದಿ, ಗಂಗಾವತಿ ತಾಪಂ ಸಹಾಯಕ ನಿರ್ದೇಶಕರಾದ (ಪಿಆರ್) ಮಹಾಂತಗೌಡ ಪಾಟೀಲ್, ಸಹಾಯಕ ನಿರ್ದೇಶಕರಾದ (ಗ್ರಾ.ಉ.) ಸಂತೋಷ ಕುಮಾರ್ ಹತ್ತರಕಿ, ಚುನಾವಣೆ ವಿಭಾಗದ ಶಿರಸ್ತೇದಾರರಾದ ರವಿಕುಮಾರ್ ನಾಯಕವಾಡಿ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ತಾಲೂಕು ಪಂಚಾಯತ್ ಸಿಬ್ಬಂದಿಗಳು, ವಿವಿಧ ಕಾಲೇಜುಗಳ ಉಪನ್ಯಾಸಕರು ಇದ್ದರು.