ಮಂಡ್ಯ: 17 ವರ್ಷದ ಅಪ್ರಾಪ್ತೆ ಮೇಲೆ ಮೂವರಿಂದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮೂವರನ್ನು ಮದ್ದೂರು ಪಟ್ಟಣ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹೌದು ಮಂಡ್ಯದ ಮದ್ದೂರಿನಲ್ಲಿ ಈ ಘಟನೆ ನಡೆದಿದ್ದು, ಸಹಪಾಠಿಗಳೇ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ. ಪುನೀತ್ ಎಂಬಾತ ಮೈಸೂರಿನ ಯುವ ದಸರಾದಲ್ಲಿ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡಿದ್ದ. ಪರಿಚಯದ ಬಳಿಕ ಪ್ರೀತಿ ಮಾಡುವುದಾಗಿ ನಂಬಿಸಿ, ಸಲುಗೆಯನ್ನು ಬೆಳೆಸಿಕೊಂಡಿದ್ದ.
ಈ ನಡುವೆ ನವೆಂಬರ್ 4 ರಂದು ಮದ್ದೂರಿನ ಲಾಡ್ಜ್ ಕರೆದುಕೊಂಡು ಹೋಗಿದ್ದ ಕಾಮುಕ, ತನ್ನ ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದ. ಅತ್ಯಾಚಾರದ ವಿಡಿಯೊ ಮಾಡಿಕೊಂಡ ಕಿರಾತಕರು ಆನಂತರ ಅಪ್ರಾಪ್ತೆ ಮೊಬೈಲ್ಗೆ ಕಳುಹಿಸಿ ಕರೆದಾಗ ಬರಬೇಕೆಂದು ಬೆದರಿಕೆ ಹಾಕಿದ್ದಾರೆ. ಇವರ ಕಿರುಕುಳದಿಂದ ಕಂಗಲಾದ ಅಪ್ರಾಪ್ತೆ ನಡೆದಿದ್ದನ್ನು ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಅಪ್ರಾಪ್ತೆ ಪೋಷಕರಿಂದ ದೂರು ದಾಖಲಾದ ಬೆನ್ನಲ್ಲೇ ಮೂವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.