ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಅವರು ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ‘ಬಿಚ್ಚುಗತ್ತಿ’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿರುವ ರಾಜವರ್ಧನ್ ಇತ್ತೀಚೆಗಷ್ಟೇ ‘ಹಿರಣ್ಯ’ ಅನ್ನೋ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. ಇದೀಗ ಮ್ಯಾಸೀವ್ ಸ್ಟಾರ್ ಖಾತೆಯಿಂದ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾ ಗಜರಾಮ. ಟೈಟಲ್ ಹಾಗೂ ಒಂದಷ್ಟು ಝಲಕ್ ಮೂಲಕ ಕುತೂಹಲ ಹೆಚ್ಚಿಸಿರುವ ಗಜರಾಮ ಸಿನಿಮಾದ ಸ್ಪೆಷಲ್ ನಂಬರ್ ರಿಲೀಸ್ ಆಗಿದೆ. ಮೇಕಿಂಗ್ ಹಂತದಲ್ಲಿ ಟಾಕ್ ಕ್ರಿಯೇಟ್ ಮಾಡಿದ್ದ ಸಾರಾಯಿ ಶಾಂತಮ್ಮ ಹಾಡು ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಿನ್ನೆ ಸಾರಾಯಿ ಶಾಂತಮ್ಮ ಸಾಂಗ್ ಇವೆಂಟ್ ನಲ್ಲಿ ನಟ ರಾಜವರ್ಧನ್, ನಟಿ ರಾಗಿಣಿ ಸೇರಿದಂತೆ ಇಡೀ ತಂಡ ಭಾಗಿಯಾಗಿತ್ತು.
ಹಾಡು ಬಿಡುಗಡೆ ಬಳಿಕ ನಟ ರಾಜವರ್ಧನ್ ಮಾತನಾಡಿ, ಈ ಹಾಡಿಗಾಗಿ ತುಂಬಾ ಕಾಯುತ್ತಿದ್ದೇವು. ವಿಡಿಯೋ ಸಾಂಗ್ ತುಂಬಾ ಚೆನ್ನಾಗಿ ಬಂದಿದೆ. ಗಜರಾಮ ಸಿನಿಮಾ ಒಂದು ಕಡೆಯಾದರೆ, ಈ ಸಾಂಗ್ ಒಂದು ಕಡೆ. ಈ ಹಾಡಿಗೆ ಸಾಕಷ್ಟು ಖರ್ಚಾಗಿದೆ. ಸಾಮಾನ್ಯವಾಗಿ ಈ ರೀತಿ ಹಾಡನ್ನು ಮಾಡಲು ಕಷ್ಟ ಆಗುತ್ತದೆ. ಸಾಂಗ್ ತುಂಬಾ ಅದ್ಭುತವಾಗಿ ಬಂದಿದೆ. ಚಿನ್ಮಯಿ ಸರ್ ಒಳ್ಳೆ ಲಿರಿಕ್ಸ್ ಬರೆದುಕೊಟ್ಟರು. ಧನು ಮಾಸ್ಟರ್ ಅದ್ಭುತ ಕೊರಿಯೋಗ್ರಫಿ ಮಾಡಿದ್ದಾರೆ. ನಿರ್ದೇಶಕರು ಸಿನಿಮಾಗಾಗಿ ಸಾಕಷ್ಟು ದುಡಿದಿದ್ದಾರೆ, ಇಡೀ ತಂಡ ಸಾಕಷ್ಟು ಎಫರ್ಟ್ ಹಾಕಿ ಚಿತ್ರವನ್ನು ಚೆನ್ನಾಗಿ ಮಾಡಿದ್ದೇವೆ ಎಂದರು.
ನಟಿ ರಾಗಿಣಿ ಮಾತನಾಡಿ, ಹಬ್ಬದ ದಿನ ಸಂಭ್ರಮ ಇರಬೇಕೆಂದು ತೀರ್ಮಾನ ಮಾಡಿದ್ದೇವೆ. ತುಂಬಾ ಖುಷಿಯಾಗುತ್ತಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವ ಖುಷಿ ಇದೆ. 1 ವರ್ಷದಿಂದ ಈ ಚಿತ್ರದಲ್ಲಿ ಜರ್ನಿ ಮಾಡಿಕೊಂಡು ಬರುತ್ತಿದ್ದೇವೆ. ಹಾಡಿನಲ್ಲಿ ರಾಜ್ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಾ. ಮನಮಮೂರ್ತಿ ಸರ್ ಇಷ್ಟು ಒಳ್ಳೆ ಮ್ಯೂಸಿಕ್ ಮಾಡುತ್ತಾರೆ ಎಂದುಕೊಂಡಿರಲಿಲ್ಲ. ಈ ಹಾಡು ಕೇಳಿ ಎಲ್ಲರಿಗೂ ಒಂದೊಳ್ಳೆ ಪಾಸಿಟಿವ್ ಬಂದಿದೆ ಎಂದುಕೊಳ್ಳುತ್ತೇನೆ. ಸಿನಿಮಾ ಮಾಡೋದು ತುಂಬಾ ಕಷ್ಟವಾಗಿದೆ. ಬಹಳ ತಾಳ್ಮೆಯಿಂದ, ಹಾರ್ಡವರ್ಕ್ ನಲ್ಲಿ ಸಿನಿಮಾ ಮಾಡುವುದು ಎನ್ನುವುದು ಇದೆಯಲ್ಲಾ ಈ ವಿಚಾರದಲ್ಲಿ ನಿರ್ಮಾಪಕರಿಗೆ ಧನ್ಯವಾದ ತಿಳಿಸಬೇಕು ಎಂದರು.
ಗಜರಾಮ ಸಿನಿಮಾದ ಸಾರಾಯಿ ಶಾಂತಮ್ಮ ಹಾಡಿಗೆ ಚಿನ್ಮಯ್ ಭಾವಿಕೆರೆ ಸಾಹಿತ್ಯ ಬರೆದಿದ್ದು, ಮಂಗ್ಲಿ ಹಾಗೂ ಕುನಲ್ ಗಾಂಜಾವಾಲಾ ಧ್ವನಿಯಾಗಿದ್ದಾರೆ, ಮನೋಮೂರ್ತಿ ರಾಕಿಂಗ್ ಮ್ಯೂಸಿಕ್, ಮ್ಯಾಸೀವ್ ಸ್ಟಾರ್ ರಾಜವರ್ಧನ್ ಹಾಗೂ ಮಾಸ್ ಕ್ವೀನ್ ರಾಗಿಣಿ ದ್ವಿವೇದಿ ಭರ್ಜರಿ ಕುಣಿತ ಹಾಡಿನ ತೂಕ ಹೆಚ್ಚಿಸಿದೆ. ಈ ಸಿನಿಮಾವನ್ನು ಯುವ ನಿರ್ದೇಶಕ ಸುನಿಲ್ ಕುಮಾರ್ ವಿ.ಎ. ನಿರ್ದೇಶನ ಮಾಡುತ್ತಿದ್ದಾರೆ. ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ರಾಜವರ್ಧನ್ ಗೆ ಜೋಡಿಯಾಗಿ ತಪಸ್ವಿನಿ ಬಣ್ಣ ಹಚ್ಚಿದ್ದಾರೆ. ಪೊಲೀಸ್ ಪಾತ್ರದಲ್ಲಿ ದೀಪಕ ನಟಿಸಿದ್ದಾರೆ. ಕಬೀರ್ ಸಿಂಗ್ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ.
ಆಕ್ಷನ್ ಮಾಸ್ ಎಂಟರ್ಟೇನರ್ ಆಗಿರುವ ‘ಗಜರಾಮ’ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡುತ್ತಿರುವುದು ವಿಶೇಷ. ಈ ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ ಮಾಡುತ್ತಿದ್ದು, ಜ್ಞಾನೇಶ್ ಬಿ. ಮಠದ್ ಸಂಕಲನದ ಹೊಣೆ ಹೊತ್ತುಕೊಂಡಿದ್ದಾರೆ. ಧನಂಜಯ್ ಅವರ ಕೊರಿಯೋಗ್ರಾಫಿ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ‘ಬಾಂಡ್ ರವಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ನರಸಿಂಹಮೂರ್ತಿ ‘ಗಜರಾಮ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಡಿಸೆಂಬರ್ 27ಕ್ಕೆ ರಾಜಾದ್ಯಂತ ಗಜರಾಮ ಸಿನಿಮಾ ಬಿಡುಗಡೆಯಾಗಲಿದೆ.