ನಟಿ ಲೀಲಾವತಿಯವರ 86 ವರ್ಷಗಳ ಬದುಕಿನ ಪಯಣ ಸದಾ ನೆನಪಿನಂಗಳದಲ್ಲಿ ಹಚ್ಚಹಸಿರಾಗಿ ಉಳಿಯುವಂಥದ್ದು. ಸಿನಿಮಾರಂಗ ಕಂಡ ಶ್ರೇಷ್ಠ ಪ್ರತಿಭೆ ಇನ್ನೂ ನೆನಪು ಮಾತ್ರ.
ಮೂರು ತಲೆಮಾರುಗಳಿಗೆ ಚಿರಪರಿಚಿತ ನಾಯಕಿ ಲೀಲಾವತಿ. ನಾಯಕಿಗೆ ಹೇಳಿಸಿದಂತೇ ಇದ್ದ ಸುಂದರ ಮುಖ, ಅರಳು ಕಣ್ಣುಗಳು, ತಿದ್ದಿತೀಡಿದಂಥ ಹುಬ್ಬು, ಮೂಗು, ಮೈಮಾಟ ಜತೆಗೆ ಪ್ರಬುದ್ಧ ಅಭಿನಯದೊಂದಿಗೆ ಚಿತ್ರರಂಗದ ಪ್ರವೇಶ. ನಾಯಕಿಯಾಗಿ ಛಾಪು ಮೂಡಿಸಿದ ಲೀಲಾವತಿ ಪೋಷಕ ನಟಿಯಾಗಿಯೂ ಎಲ್ಲರ ಪ್ರೀತಿಗಳಿಸಿಕೊಂಡವರು.
ಭಾವಪೂರ್ಣ ಅಭಿನಯಕ್ಕೆ ಹೆಸರಾದ ಲೀಲಾವತಿಯವರು ಅಭಿನಯ ಕ್ಷೇತ್ರಕ್ಕೆ ಬರಲೇಬೇಕೆಂಬ ಹಂಬಲದಿಂದೇನೂ ಬಂದವರಲ್ಲ. ಅವರ ಜೀವನ ತುಂಬ ದುಸ್ತರವಾಗಿತ್ತು. ಚಿಕ್ಕಂದಿನಲ್ಲಿ ತುಂಬ ಬಡತನವನ್ನು ಕಂಡವರು. ಯಾರೋ, ‘ಸಿನಿಮಾದಲ್ಲಿ ತುಂಬ ದುಡ್ಡು ಸಿಗುತ್ತದೆ’ ಎಂದಾಗ, ಅದನ್ನು ಕೇಳಿದ ಲೀಲಾವತಿಯವರು ‘ಹೌದಾ’ ಎಂದು ಕಣ್ಣರಳಿಸಿದ್ದರಂತೆ. ಹಾಗಂತ ಸ್ವತಃ ಲೀಲಾವತಿಯವರೇ ಹೇಳಿಕೊಂಡಿದ್ದಾರೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾದ ಲೀಲಾವತಿ ಬಡತನದ ಕಾರಣದಿಂದಲೇ ಸಿನಿಮಾ ಕ್ಷೇತ್ರಕ್ಕೆ ಬಂದವರು. ರಂಗಭೂಮಿ ಹಾಗೂ ಚಲನಚಿತ್ರರಂಗದಲ್ಲಿ ಅಭಿನಯಿಸಬೇಕೆಂಬ ಅದಮ್ಯ ಹಂಬಲದಿಂದ ಅವರು ಹದಿಹರೆಯದಲ್ಲೇ ಮೈಸೂರಿಗೆ ಬಂದರು. ಹಾಗೆ ಮೈಸೂರಿಗೆ ಬಂದಾಕ್ಷಣ ಅವರಿಗೆ ಚಿತ್ರರಂಗ ರತ್ನಗಂಬಳಿ ಹಾಸಿ ಸ್ವಾಗತಿಸಲಿಲ್ಲ. ಉತ್ತಮ ಅವಕಾಶ ಸಿಗಲು ಸಾಕಷ್ಟು ದಿನಗಳ ಕಾಲ ಕಷ್ಟಪಡಲೇ ಬೇಕಾಯಿತು.
ಬೆಂಗಳೂರಿನ ನೆಲಮಂಗಲದ ಬಳಿ ತೋಟ ಮಾಡಿ, ಸದಾ ತೋಟ, ಬೆಳೆ ಎಂದು ಅಪ್ಪಟ ರೈತ ಮಹಿಳೆಯೇ ಆಗಿದ್ದರು ಲೀಲಾವತಿ. ಜತೆಗೆ ಸಾರ್ವಜನಿಕರಿಗಾಗಿ ಆಸ್ಪತ್ರೆ, ಪಶು ಚಿಕಿತ್ಸೆಗಾಗಿ ಪಶು ಆಸ್ಪತ್ರೆ ಕಟ್ಟಿಸಿ ಸ್ಥಳೀಯರಿಗೆ ನೆರವಾಗಿದ್ದಾರೆ ಲೀಲಾವತಿ.
ಲೀಲಾವತಿ ಅವರು ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರೂ ಸಿನಿಮಾ ಕಲಾವಿದರ ಬಗ್ಗೆ ಕಾಳಜಿ ಹೊಂದಿದ್ದರು. ಅನೇಕ ಕಲಾವಿದರಿಗೆ ಮಾಸಾಶನ ಸಿಗುವಂತೆ ಮಾಡಿದ್ದರು. ಪ್ರಾಣಿಗಳ ಬಗ್ಗೆ ಅವರಿಗೆ ಅಪಾರ ಪ್ರೀತಿ ಇತ್ತು. ಅದೇ ಕಾರಣಕ್ಕಾಗಿ ಅವರು ಸ್ವಂತ ಹಣದಲ್ಲಿ ಸೋಲದೇವನಹಳ್ಳಿ ಬಳಿ ಪಶು ಆಸ್ಪತ್ರೆ ನಿರ್ವಿುಸಿದ್ದರು.
ಮೈಲನಹಳ್ಳಿಯ ನಿವಾಸಕ್ಕೆ ಲೀಲಾವತಿ ಪಾರ್ಥಿವ ಶರೀರ ತರಲಾಗಿದ್ದು, ಶನಿವಾರ ನೆಲಮಂಗಲದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಅವರ ತೋಟದಲ್ಲೇ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಪುತ್ರ ವಿನೋದ್ ರಾಜ್ ತಿಳಿಸಿದ್ದಾರೆ.