ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇನ್ಮುಂದೆ ಫ್ರೈಮರಿ ಶಾಲಾ ಮಕ್ಕಳಿಗೆ ಆನ್ ಲೈನ್ ತರಗತಿ ನಡೆಸುವಂತೆ ಸರ್ಕಾರ ಆದೇಶ ನೀಡಿದೆ. ಇದಕ್ಕೆ ಕಾರಣ ದೆಹಲಿಯ ಕಾಡುತ್ತಿರುವ ಮಾಲಿನ್ಯ.
ದೆಹಲಿ ಸರ್ಕಾರ ಏನೇ ಮಾಡಿದರೂ ಸಹ ಮಾಲಿನ್ಯ ನಿಯಂತ್ರಣಕ್ಕೆ ಬರ್ತಿಲ್ಲ. ಸತತ ಮೂರನೇ ದಿನವೂ ಸಹ ದಟ್ಟ ಮಾಲಿನ್ಯದ ಹೊಗೆ ಇಡೀ ರಾಜ್ಯವನ್ನೇ ಆವರಿಸಿದೆ. ಅದರಲ್ಲೂ ದೆಹಲಿ ವಿಶ್ವದಲ್ಲೇ ಅತೀ ಮಾಲಿನ್ಯ ಹೊಂದಿರುವ ಎರಡನೇ ನಗರವಾಗಿದೆ. ಸ್ವಿಸ್ ಕಂಪೆನಿಯ ಪಾರ್ಟಿಕ್ಯುಲೇಟ್ ಡೇಟಾವನ್ನು ಆಧರಿಸಿ, ಕೆಲವು ನಗರಗಳನ್ನು ಶ್ರೇಣಿಕೃತಗೊಳಿಸಿದೆ. ಇದರಲ್ಲಿ ಪಾಕಿಸ್ತಾನದ ಲಾಹೋರ್ ಮೊದಲ ಸ್ಥಾನದಲ್ಲಿದ್ದರೆ ದೆಹಲಿ ಎರಡನೇ ಸ್ಥಾನದಲ್ಲಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಆ್ಯಪ್ನ ಪ್ರಕಾರ ಜಹಾಂಗೀರ್ಪುರಿ (AQI 458), ಬವಾನಾ (455), ವಜೀರ್ಪುರ (455), ರೋಹಿಣಿ (452), ಮತ್ತು ಪಂಜಾಬಿ ಬಾಗ್ (443) ಮೊದಲ ಐದು ಮಾಲಿನ್ಯ ಪ್ರದೇಶಗಳಾಗಿವೆ. ದೆಹಲಿಯ ಪಾಲಂ ಮತ್ತು ಸಫ್ದುರ್ಜಂಗ್ ಕ್ರಮವಾಗಿ 500ಮೀ ಮತ್ತು 400ಮೀ ಗೋಚರತೆ ಹೊಂದಿವೆ ಎಂದು ವರದಿ ಮಾಡಿದೆ. ಹೊಗೆಯ ಕಾರಣದಿಂದಾಗಿ ಕಡಿಮೆ ಗೋಚರತೆಯುಂಟಾಗಿದ್ದು, ವಿಮಾನ ಮತ್ತು ರೈಲು ಕಾರ್ಯಾಚರಣೆಗಳ ಮೇಲೆ ಭಾರೀ ಪರಿಣಾಮ ಬೀರಿದೆ. ನವದೆಹಲಿ ರೈಲು ನಿಲ್ದಾಣಕ್ಕೆ ಆಗಮಿಸುವ 25 ಕ್ಕೂ ಹೆಚ್ಚು ರೈಲುಗಳೂ ಸಹ ವಿಳಂಬವಾಗಿವೆ.
ಹೀಗಾಗಿ ವಾಯು ಮಾಲಿನ್ಯ ನಿಯಂತ್ರಣ್ಕಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಪ್ರಾಥಮಿಕ ಶಾಲೆಗಳಿಗೆ ಆನ್ ಲೈನ್ ತರಗತಿ ಮಾಡಲು ಆದೇಶ ನೀಡಲಾಗಿದೆ. ಮುಂದಿನ ಆದೇಶದವರೆಗೂ ಸಹ ದೈಹಿಕ ತರಗತಿಗಳಿಗೆ ನಿರ್ಬಂಧ ಹೇರಿದೆ. ಇನ್ನೂ ಕಟ್ಟಡ ಡೆಮಾಲಿಶನ್ ಮತ್ತು ನಿರ್ಮಾಣ ಚಟುವಟಿಕೆಗಳ ಮೇಲೆ ನಿಷೇಧ ಹೇರಲಾಗಿದ್ದು, ದೆಹಲಿ ಎನ್ ಸಿ ಆರ್ ಗೆ ಕೆಲವು ವಾಹನಗಳ ಪ್ರವೇಶ ಕೂಡ ನಿರ್ಬಂಧಿಸಲಾಗಿದೆ.