ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪೌರಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜುಲೈ 18ರಿಂದ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ, ಪಾಲಿಕೆ ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು’ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಎಂ. ಗುಂಟ್ರಾಳ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗುತ್ತಿಗೆ ಪದ್ಧತಿ ರದ್ದುಪಡಿಸಿ, ಪೌರಕಾರ್ಮಿಕರ ನೇರ ನೇಮಕಾತಿ ಹಾಗೂ ನೇರ ವೇತನ ಪಾವತಿಗೆ ರಾಜ್ಯ ಸರ್ಕಾರ ಆದೇಶಸಿದ್ದರೂ ಪಾಲಿಕೆಯ 134 ಪೌರಕಾರ್ಮಿಕರನ್ನು ಇನ್ನೂ ಕಾಯಂಗೊಳಿಸಿಲ್ಲ. ಯಾವುದೇ ಬೇಡಿಕೆ ಈಡೇರಿಸದೆ ದಲಿತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ’ ಎಂದು ಆರೋಪಿಸಿದರು.
‘ಪೌರ ಕಾರ್ಮಿಕರ ಸಂಘಕ್ಕೆ ಪಾಲಿಕೆ ಆವರಣದಲ್ಲಿ ಕೊಠಡಿ, 799 ಗುತ್ತಿಗೆ ಪೌರ ಕಾರ್ಮಿಕರಿಗೆ ನೇರ ವೇತನ ನೀಡಿಕೆ, ಕನಿಷ್ಠ ವೇತನ ವ್ಯತ್ಯಾಸ ಬಾಕಿ ₹9 ಕೋಟಿ ಪಾವತಿ, ಮೆಡಿಕಲ್ ಬೋನಸ್ ₹21.70 ಲಕ್ಷ, ಪ್ರತಿ ತಿಂಗಳು ₹2,000 ಸಂಕಷ್ಟ ಭತ್ಯೆ ಮಂಜೂರು, ವಸತಿ ಸೌಲಭ್ಯ, ನಿವೃತ್ತ ಹಾಗೂ ಕಾರ್ಯನಿರತ ಪೌರಕಾರ್ಮಿಕರು ಮೃತಪಟ್ಟರೆ ಅವರ ಕುಟುಂಬಕ್ಕೆ ₹10 ಲಕ್ಷ ಪರಿಹಾರ, ₹5,000 ನಿವೃತ್ತಿ ವೇತನ ನೀಡಬೇಕು’ ಎಂದು ಆಗ್ರಹಿಸಿದರು.
‘ಆರೋಗ್ಯ ವಿಮೆ, ವಾರದ ರಜೆ, ಬಯೋಮೆಟ್ರಿಕ್ ಹಾಜರಾತಿ, ಗುಣಮಟ್ಟದ ಉಪಾಹಾರ, ಸಾಮಾಜಿಕ ಭದ್ರತೆ ಒದಗಿಸಲು ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು. ಸಂಘದ ಉಪಾಧ್ಯಕ್ಷ ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಕನಕಪ್ಪ ಕೊಟಬಾಗಿ, ಸೋಮು ಮೊರಬದ, ದತ್ತಪ್ಪ ಆಪುಸಪೇಟ, ಲಕ್ಷ್ಮೀ ವೇತಾಪಲ್ಲಿ ಇದ್ದರು.