ಪ್ಯಾರಿಸ್: ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಪ್ರವಾಸಕ್ಕೆ ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಗೆ ಆಗಮಿಸಿದ್ದಾರೆ. ಇಂದು ಪ್ಯಾರಿಸ್ ನಲ್ಲಿ ನಡೆಯಲಿರುವ ಎಐ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸುವ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಬರಮಾಡಿಕೊಂಡ ಫ್ಲಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆತ್ಮೀಯ ಸ್ವಾಗತ ಕೋರಿದ್ದಾರೆ.
ಇದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, ಪ್ಯಾರಿಸ್ನಲ್ಲಿ ನನ್ನ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್ ಅವರನ್ನು ಭೇಟಿ ಮಾಡಿದ್ದು ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ. ಫ್ರಾನ್ಸ್ನಲ್ಲಿ ಇಂದು ನಡೆಯಲಿರುವ ಎಐ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ತೆರಳಿದ್ದಾರೆ. ಅವರು ಫ್ರಾನ್ಸ್ಗೆ ಬಂದಿಳಿಯುತ್ತಿದ್ದಂತೆ ಭಾರತೀಯ ಮೂಲದವರು ಅವರನ್ನು ವಿಶಿಷ್ಟವಾಗಿ ಬರಮಾಡಿಕೊಂಡರು. ಕಳೆದ ರಾತ್ರಿ ಔತಣಕೂಟದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಆತ್ಮೀಯವಾಗಿ ಆಲಿಂಗಿಸಿ ಸ್ವಾಗತಿಸಿದರು.
ಔತಣಕೂಟದಲ್ಲಿ, ಪ್ರಧಾನ ಮಂತ್ರಿಗಳು AI ಶೃಂಗಸಭೆಯಲ್ಲಿ ಭಾಗವಹಿಸಲು ಫ್ರಾನ್ಸ್ ಗೆ ಆಗಮಿಸಿರುವ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಸಹ ಭೇಟಿಯಾದರು. ಇದನ್ನು ಪ್ರಧಾನ ಮಂತ್ರಿ ಕಚೇರಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಪ್ರಧಾನಿ ಮೋದಿ ತಮ್ಮ ಎರಡು ರಾಷ್ಟ್ರಗಳ ಪ್ರವಾಸದ ಮೊದಲ ಹಂತವಾಗಿ ಪ್ಯಾರಿಸ್ಗೆ ಆಗಮಿಸಿದರು, ತಮ್ಮ ಮೂರು ದಿನಗಳ ಭೇಟಿಯ ಸಮಯದಲ್ಲಿ, ಮೋದಿಯವರು ಪ್ಯಾರಿಸ್ನಲ್ಲಿ ಮ್ಯಾಕ್ರನ್ ಅವರೊಂದಿಗೆ AI ಆಕ್ಷನ್ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ, ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ ಮತ್ತು ಉದ್ಯಮ ನಾಯಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಅಲ್ಲಿಂದ ಅಮೆರಿಕಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ.