ಬೆಂಗಳೂರು: ರಾಜ್ಯದಲ್ಲಿಸರ್ಕಾರದ ಶಕ್ತಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಸರ್ಕಾರದ ಶಕ್ತಿ ಯೋಜನೆಗೆ ಮಹಿಳೆಯರು ಉತ್ತಮ ಅಭಿಪ್ರಾಯ ವ್ಯಕ್ತವಾಗಿದ್ದು, ಇದೀಗ ಪುರುಷರಿಗೂ ಫ್ರೀ ಬಸ್ ಸಿಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಶಕ್ತಿ ಯೋಜನೆಯಡಿ ವಯೋಮಿತಿಯನ್ವಯ ಗಂಡಸರಿಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಈ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಮೂಲಕ ಪುರುಷರಿಗೂ ಫ್ರೀ ಬಸ್ ಪ್ರಯಾಣ ಸೌಲಭ್ಯ ಸಿಗುವ ಸಾಧ್ಯತೆ ಇದೆ. ಕಳೆದ ಗುರುವಾರ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂರವರ 135ನೇ ಜಯಂತಿ, ಮಕ್ಕಳ ದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿ ಮಕ್ಕಳೊಂದಿಗೆ ಡಿ.ಕೆ.ಶಿವಕುಮಾರ್ ಸಂವಾದ ಕಾರ್ಯಕ್ರಮ ನಡೆಸಿದರು. ಈ ವೇಳೆ ವಿದ್ಯಾರ್ಥಿಯೊಬ್ಬನೇ ಹೆಣ್ಣು ಮಕ್ಕಳಿಗೂ ಉಚಿತ ಬಸ್ ವ್ಯವಸ್ಥೆಯ ಹಾಗೇ ಗಂಡಸರಿಗೂ ಕೊಡ್ತೀರಾ ಎಂದು ಪ್ರಶ್ನಿಸಿದ್ದ. ಆಗ ಡಿಸಿಎಂ ಡಿಕೆಶಿವಕುಮಾರ್ ಶಕ್ತಿ ಯೋಜನೆಯಡಿ ಒಂದು ವಯೋಮಾನದ ವರೆಗಿನ ಗಂಡು ಮಕ್ಕಳಿಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಯೋಚಿಸಿ ಕ್ರಮ ವಹಿಸಲಾಗುವುದು ಎಂದು ಹೇಳಿದ್ದು, ಚರ್ಚೆಗೆ ಗ್ರಾಸವಾಗಿದೆ.