ಬೆಂಗಳೂರು :– ಗೃಹ ಸಚಿವರ ಆಪ್ತನೆಂದು ಪರಿಚಯಿಸಿಕೊಂಡು ವ್ಯಕ್ತಿಯಿಂದ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ
ಕಾಲೇಜಿನಿಂದ ನಕಲಿ ಶುಲ್ಕ ರಶೀದಿಯನ್ನು ಸಹ ನೀಡಿ ಆರೋಪಿಗಳು ವಂಚಿಸಿದ್ದಾರೆ. 53 ವರ್ಷದ ವ್ಯಕ್ತಿ ಮತ್ತು ಅವರ ಮಗಳು ಕಾಲೇಜಿಗೆ ತೆರಳಿ ವಿಚಾರಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ.
ಆರ್. ಆರ್. ನಗರ ನಿವಾಸಿಯಾದ ದೂರುದಾರರ ಪುತ್ರಿ ಎಂಬಿಬಿಎಸ್ ಮುಗಿಸಿ ಪಿಜಿ ಕೌನ್ಸೆಲಿಂಗ್ ಸಮಯದಲ್ಲಿ ಸೀಟಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಪರಿಚಯಸ್ಥರೊಬ್ಬರ ಮೂಲಕ ಕೊರಟಗೆರೆ ಮೂಲದ ಮೊಹಮ್ಮದ್ ಜುಬೇರ್ ಎಂಬಾತ ಪರಿಚಯವಾಗಿದ್ದ. ಜಯನಗರದ ರೆಸ್ಟೋರೆಂಟ್ನಲ್ಲಿ ಭೇಟಿಯಾಗಿ ತುಮಕೂರಿನ ಕಾಲೇಜಿನಲ್ಲಿ ಪಿಜಿ ಸೀಟು ಕೊಡಿಸುವುದಾಗಿ ಭರವಸೆ ನೀಡಿದ್ದ. ಪ್ರತಿಯಾಗಿ 4.5 ಲಕ್ಷ ರೂ. ಹಣ ಪಡೆದಿದ್ದ.
ದೂರುದಾರರು ತಮ್ಮ ಬ್ಯಾಂಕ್ ಖಾತೆಯಿಂದ ಆರೋಪಿಯ ಪೇಟಿಎಂ ಖಾತೆಗೆ ಹಣ ವರ್ಗಾಯಿಸಿದ್ದರು. ನಂತರ ಜುಬೇರ್ ಕಾಲೇಜಿನ ಹೆಸರಿನ ಶುಲ್ಕದ ರಸೀದಿ ನೀಡಿದ್ದ. ಆದರೆ ನಂತರದಲ್ಲಿ ಕಾಲೇಜಿನಿಂದ ಯಾವುದೇ ಮಾಹಿತಿ ಅಥವಾ ಸಂದೇಶಗಳು ಬಾರದಿದ್ದಾಗ ದೂರುದಾರ ಮತ್ತು ಅವರ ಮಗಳು ಕಾಲೇಜಿಗೆ ಭೇಟಿ ನೀಡಿ ವಿಚಾರಿಸಿದಾಗ ವಂಚನೆಯಾಗಿರುವುದು ತಿಳಿದುಬಂದಿದೆ