ವಂಚನೆ ಆರೋಪ ಎದುರಿಸುತ್ತಿರುವ ಬ್ರಿಟನ್ ಸಾರಿಗೆ ಸಚಿವೆ ಲೂಯಿಸ್ ಹೆಯ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದು ಪ್ರಧಾನಿ ಕೀರ್ ಸ್ಟಾರ್ಮರ್ ಸರಕಾರಕ್ಕೆ ಹಿನ್ನಡೆ ಉಂಟು ಮಾಡಿದೆ.
ಸಂಸತ್ ಸದಸ್ಯೆಯಾಗುವ ಮುನ್ನ ಲೂಯಿಸ್ ಕ್ರಿಮಿನಲ್ ಅಪರಾಧಕ್ಕೆ ತಪ್ಪೊಪ್ಪಿಕೊಂಡಿದ್ದರು ಎಂಬ ಮಾಹಿತಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಘೋಷಿಸಿದ್ದಾರೆ.
2013ರಲ್ಲಿ ತನ್ನ ಮನೆಯಲ್ಲಿ ಕಳ್ಳತನ ನಡೆದಾಗ ತನ್ನ ಕೆಲಸದ ಮೊಬೈಲ್ ಕೂಡಾ ಕಳವಾಗಿದೆ ಎಂದು ಲೂಯಿಸ್ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಬಳಿಕ ಮೊಬೈಲ್ ಪತ್ತೆಯಾದರೂ ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದ್ದು 2014ರಲ್ಲಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದರು ಎಂದು ಮಾಧ್ಯಮಗಳು ಗುರುವಾರ ವರದಿ ಮಾಡಿದ್ದವು. ಸರಕಾರಕ್ಕೆ ಮುಜುಗುರ ಆಗುವುದನ್ನು ತಪ್ಪಿಸಲು ರಾಜೀನಾಮೆ ನೀಡುತ್ತಿರುವುದಾಗಿ ಲೂಯಿಸ್ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.