ಇತ್ತೀಚೆಗಷ್ಟೇ ರಿಲೀಸ್ ಆಗಿರುವ ದುಲ್ಕರ್ ಸಲ್ಮಾನ್ ನಟನೆಯ ಲಕ್ಕಿ ಬಾಸ್ಕರ್ ಸಿನಿಮಾ ಸೂಪರ್ ಹಿಟ್ ಆಗಿದೆ. ಸಾಮಾನ್ಯ ಮನುಷ್ಯ ಯಾವ ರೀತಿಯಲ್ಲಿ ದುಡ್ಡು ಮಾಡುತ್ತಾನೆ ಅನ್ನೋದನ್ನ ಲಕ್ಕಿ ಭಾಸ್ಕರ್ ಸಿನಿಮಾದಲ್ಲಿ ತೋರಿಸಲಾಗಿದೆ. ಇದೀಗ ಈ ಸಿನಿಮಾ ನೋಡಿದ ನಾಲ್ವರು ಹುಡುಗರು ಲಕ್ಕಿ ಭಾಸ್ಕರ್ ನಂತೆಯೇ ಹಣ ಮಾಡಲು ಹಾಸ್ಟೆಲ್ ನಿಂದ ಎಸ್ಕೇಪ್ ಆಗಿದ್ದಾರೆ.
9ನೇ ತರಗತಿಯ ವಿದ್ಯಾರ್ಥಿಗಳು ಲಕ್ಕಿ ಭಾಸ್ಕರ್ ಸಿನಿಮಾ ನೋಡಿ ನಾವು ಆ ಹೀರೋ ರೀತಿಯಲ್ಲೇ ದುಡ್ಡು ಮಾಡೋಕೆ ಹೋಗ್ತೀವಿ ಅಂತ ಹಾಸ್ಟೆಲ್ನಿಂದ ಎಸ್ಕೇಪ್ ಆಗಿದ್ದಾರೆ. ನಾಲ್ವರು ವಿದ್ಯಾರ್ಥಿಗಳು ಗೇಟ್ ಹಾರಿ ಎಸ್ಕೇಪ್ ಆಗಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ದುಲ್ಕರ್ ಸಲ್ಮಾನ್ ಅಂದ್ರೆ ಬಾಸ್ಕರ್ ಹೇಗೆ ಹಣ ಸಂಪಾದನೇ ಮಾಡ್ತಾರೋ ಅದೇ ರೀತಿ ದುಡ್ಡು ಸಂಪಾದಿಸಲು ಸ್ಫೂರ್ತಿ ಪಡೆದು ವಿಶಾಖಪಟ್ಟಣಂನಲ್ಲಿರುವ ಸೇಂಟ್ ಆನ್ಸ್ ಹೈಸ್ಕೂಲ್ನ 9ನೇ ತರಗತಿಯ ವಿದ್ಯಾರ್ಥಿಗಳು ಸೋಮವಾರ ಮುಂಜಾನೆ 6.20ರ ಸುಮಾರಿಗೆ ಹಾಸ್ಟೆಲ್ನಿಂದ ಪರಾರಿಯಾಗಿದ್ದಾರೆ. ಎಸ್ಕೇಪ್ ಆದ ವಿದ್ಯಾರ್ಥಿಗಳನ್ನು ಬೋಡಪತಿ ಚರಣ್ ತೇಜ, ಗುಡಾಲ ರಘು, ನಕ್ಕಲ ಕಿರಾ ಕುಮಾರ್ ಮತ್ತು ಕಾರ್ತಿಕ್ ಎಂದು ಗುರುತಿಸಲಾಗಿದೆ.
ಮಕ್ಕಳು ಹಾಸ್ಟೆಲ್ ನಿಂದ ಎಸ್ಕೇಪ್ ಆಗಿರುವ ವಿಚಾರ ತಿಳಿಯುತ್ತಿದ್ದಂತೆ ವಿದ್ಯಾರ್ಥಿಗಳ ಪೋಷಕರು ಕಂಗಾಲಾಗಿದ್ದಾರೆ. ಮಕ್ಕಳು ನಾಪತ್ತೆಯಾಗಿರುವವರ ಕುರಿತು ಪೋಷಕರು ಎಂಆರ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆಯಾಗಿರುವ ವಿದ್ಯಾರ್ಥಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದಾರೆ. ಇದಾದ ಬಳಿಕ ಮಂಗಳವಾರ ರಾತ್ರಿ ವಿದ್ಯಾರ್ಥಿಗಳನ್ನು ವಿಜಯವಾಡದಲ್ಲಿ ಪತ್ತೆ ಹಚ್ಚಿ, ಮರಳಿ ವೈಜಾಗ್ಗೆ ಕರೆತರುವ ವ್ಯವಸ್ಥೆ ಮಾಡಿದ್ದಾರೆ.
‘ಲಕ್ಕಿ ಬಾಸ್ಕರ್’ ಕಥೆಯೂ ಬ್ಯಾಂಕಿನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುವ ಮಧ್ಯಮ ವರ್ಗದ ಬಾಸ್ಕರ್ ಎಂಬ ವ್ಯಕ್ತಿಯ ಸುತ್ತ ಕಥೆಯನ್ನು ರೂಪಿಸಲಾಗಿದೆ. ವ್ಯವಸ್ಥೆಯಲ್ಲಿನ ನ್ಯೂನತೆಗಳ ಬಗ್ಗೆ ಅವನು ಕಂಡುಕೊಂಡ ನಂತರ ಮತ್ತು ಹಣ ವರ್ಗಾವಣೆಯ ಅಪಾಯಕಾರಿ ಜಗತ್ತಿಗೆ ಪ್ರವೇಶಿಸಿದಾಗ ಸಂಘರ್ಷ ಸಂಭವಿಸುತ್ತದೆ. ವೆಂಕಿ ಅಟ್ಲೂರಿ ನಿರ್ದೇಶನದ, ‘ಲಕ್ಕಿ ಬಾಸ್ಖರ್’ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ಮತ್ತು ಮೀನಾಕ್ಷಿ ಚೌಧರಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 31, 2024ರಂದು ಸಿನಿಮಾ ರಿಲೀಸ್ ಆಗಿದ್ದು ಓಟಿಟಿಯಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ..