ಭಾರತದ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿ ಬಳಿಕ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಡೀನ್ ಎಲ್ಗರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ. ಈ ಬಗ್ಗೆ ಶುಕ್ರವಾರ ಡೀನ್ ಎಲ್ಗರ್ ಅವರೇ ಅಧಿಕೃತ ಹೇಳಿಕೆಯ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಡಿಸೆಂಬರ್ 26 ರಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ.
ಡೀನ್ ಎಲ್ಗರ್ ಅವರು ತಮ್ಮ ಅಧಿಕೃತ ಹೇಳಿಕೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. “ಕ್ರಿಕೆಟ್ ಆಡುವುದು ನನ್ನ ಕನಸು. ಅದರಲ್ಲಿಯೂ ನನ್ನ ನೆಚ್ಚಿನ ಕ್ರೀಡೆಯಾದ ಕ್ರಿಕೆಟ್ನಲ್ಲಿ ದೇಶವನ್ನು ಪ್ರತಿನಿಧಿಸಿರುವುದು ಹೆಮ್ಮೆ ಸಂಗತಿಯಾಗಿದೆ,” ಎಂದು ಹರಿಣಗಳ ಮಾಜಿ ನಾಯಕ ಹೇಳಿದ್ದಾರೆ.
“ಅಂತಾರಾಷ್ಟ್ರೀಯ ಮಟ್ಟದಲ್ಲಿ 12 ವರ್ಷಗಳ ಕಾಲ ದೇಶವನ್ನು ಪ್ರತಿನಿಧಿಸುವ ಸವಲತ್ತು ಪಡೆದಿರುವುದು ನನ್ನ ಹುಚ್ಚು ಕನಸುಗಳನ್ನು ಮೀರಿದೆ. ನನ್ನ ಅಸಾಧಾರಣ ಪಯಣ ಇದಾಗಿದ್ದು, ನನ್ನ ಜೀವನದಲ್ಲಿ ಈ ಸ್ಮರಣೀಯ ಕ್ಷಣಗಳನ್ನು ಮರೆಯುವುದೇ ಇಲ್ಲ,” ಎಂದು ದಕ್ಷಿಣ ಆಫ್ರಿಕಾ ತಮ್ಮ ಹೇಳಿಕೆಯಲ್ಲಿ ಭಾವುಕರಾಗಿದ್ದಾರೆ.
“ಎಲ್ಲರೂ ಹೇಳಿದಂತೆ, ‘ಒಳ್ಳೆಯ ಸಂಗತಿಗಳು ಒಂದಲ್ಲ ಒಂದು ದಿನ ಕೊನೆಯಾಗುತ್ತವೆ’, ಭಾರತದ ವಿರುದ್ಧದ ತವರು ಟೆಸ್ಟ್ ಸರಣಿ ನನ್ನ ಪಾಲಿಗೆ ಕೊನೆಯದಾಗಿದೆ. ಅತ್ಯಂತ ಸುಂದರ ಕ್ರಿಕೆಟ್ ಕ್ರೀಡೆಗೆ ನಾನು ನಿವೃತ್ತಿ ಘೋಷಿಸುತ್ತಿದ್ದೇನೆ. ಈ ಆಟ ನನಗೆ ಸಾಕಷ್ಟು ನೀಡಿದೆ. ಕೇಪ್ ಟೌನ್ ಟೆಸ್ಟ್ ನನ್ನ ಪಾಲಿಗೆ ಕೊನೆಯ ಟೆಸ್ಟ್ ಪಂದ್ಯವಾಗಿದೆ. ಇಡೀ ವಿಶ್ವದಲ್ಲಿಯೇ ನನ್ನ ನೆಚ್ಚಿನ ಕ್ರೀಡಾಂಗಣ ಕೇಪ್ ಟೌನ್. ಇದೇ ಕ್ರೀಡಾಂಗಣದಲ್ಲಿಯೇ ನಾನು ಮೊದಲ ಟೆಸ್ಟ್ ರನ್ ಗಳಿಸಿದ್ದೆ, ಇದೀಗ ಅದೇ ಸ್ಥಳದಲ್ಲಿ ನನ್ನ ಕೊನೆಯ ರನ್ ಆಗಲಿದೆ,” ಎಂದು ಟೀಮ್ ಎಲ್ಗರ್ ಹೇಳಿದ್ದಾರೆ.