ಬೆಂಗಳೂರು: ಇಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನ ಕೋರಿದ್ದಾರೆ.
ನಮ್ಮೆಲ್ಲರ ಪ್ರೀತಿಯ ಕುಮಾರಣ್ಣ, ಮಾಜಿ ಮುಖ್ಯಮಂತ್ರಿಗಳು, ಜಾತ್ಯಾತೀತ ಜನತಾದಳ ಪಕ್ಷದ ಶಾಸಕಾಂಗ ಅಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಭಗವಂತ ಉತ್ತಮ ಆಯುಷ್ಯ ಆರೋಗ್ಯ ನೀಡಿ ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹಾರೈಸಿದ್ದಾರೆ.
ಈಗಾಗಲೇ HDK ಸಿಂಗಾಪುರ ಪ್ರವಾಸದಲ್ಲಿದ್ದು ಆದರೆ ಹೋಗುವ ಮೊದಲು ಅಭಿಮಾನಿಗಳಿಗೆ ಪೋಸ್ಟ್ ಮಾಡಿದ್ದಾರೆ. ನನ್ನ ಜನ್ಮದಿನವಾದ ಡಿಸೆಂಬರ್ 16ರಂದು, ನಾನು ಬೆಂಗಳೂರು ನಗರದಲ್ಲಿ ಲಭ್ಯವಿರುವುದಿಲ್ಲ. ಕಾರ್ಯಕರ್ತರಾದಿಯಾಗಿ ನನ್ನ ಮೇಲೆ ಪ್ರೀತಿ, ವಾತ್ಸಲ್ಯ ಇರಿಸಿರುವ ಪ್ರತಿಯೊಬ್ಬರೂ ನನ್ನ ವೈಯಕ್ತಿಕ ಭೇಟಿಗೆ ಪ್ರಯತ್ನಿಸದೇ ತಾವು ಇದ್ದಲ್ಲಿಂದಲೇ ಶುಭ ಕೋರಬೇಕಾಗಿ ನಿಮ್ಮೆಲ್ಲರಲ್ಲೂ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಹೆಚ್ಡಿಕೆ ಪೋಸ್ಟ್ ಮಾಡಿದ್ದಾರೆ.
1996ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಹೆಚ್ಡಿ ಕುಮಾರಸ್ವಾಮಿ, 2004ರಲ್ಲಿ ರಾಮನಗರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 2006ರಲ್ಲಿ ಬಿಜೆಪಿ ಜೊತೆಗೆ ಕೈಜೋಡಿಸಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾದರು. 2018ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಹೆಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. 2019ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರು ರಾಜೀನಾಮೆ ನೀಡಿ, ಬಿಜೆಪಿಗೆ ಸೇರಿದ್ದರಿಂದ ಬಹುಮತ ಕಳೆದುಕೊಂಡು ಹೆಚ್ಡಿ ಕುಮಾರಸ್ವಾಮಿ ರಾಜೀನಾಮೆ ನೀಡಬೇಕಾಯಿತು. ಜೊತೆಗೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಚಲನಚಿತ್ರ ನಿರ್ಮಾಪಕರಾಗಿಯೂ ಹೆಚ್ಡಿ ಕುಮಾರಸ್ವಾಮಿ ಗುರುತಿಸಿಕೊಂಡಿದ್ದಾರೆ.