ನಾವು ಬಾಯಿಗೆ ರುಚಿ ನೀಡುವ ಆಹಾರಗಳನ್ನು ಸೇವನೆ ಮಾಡುತ್ತೇವೆ ಆದರೆ ಅವು ನಮ್ಮ ಆರೋಗ್ಯಕ್ಕೆ ಒಳ್ಳೆಯದೇ ಎಂಬುದನ್ನು ಯೋಚಿಸುವುದಿಲ್ಲ. ಆದ ಕಾರಣ ನಮ್ಮ ಆರೋಗ್ಯ ಕೈ ಮೀರಿ ಹೋಗದಂತೆ ತಡೆಯಲು ಕೆಲವು ಬದಲಾವಣೆಗಳನ್ನು ಮಾಡಬೇಕಾಗಿದೆ. ಈ ಅಭ್ಯಾಸಗಳು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಪ್ರಮುಖ ಸಲಹೆಗಳು ಇಲ್ಲಿವೆ.
ದೆಹಲಿ ಚುನಾವಣೆ ದಿನವೇ ನಾಳೆ ಕುಂಭಮೇಳಕ್ಕೆ ಭೇಟಿ ಕೊಡಲಿದ್ದಾರೆ ಪ್ರಧಾನಿ ಮೋದಿ!
ಅಧಿಕ ಉಪ್ಪಿನ ಸೇವನೆಯನ್ನು ತಪ್ಪಿಸಿ;
ಸಾಮಾನ್ಯವಾಗಿ ನಾವು ದಿನನಿತ್ಯ ಸೇವನೆ ಮಾಡುವ ಉಪ್ಪು ಅಗತ್ಯಕ್ಕಿಂತ ಹೆಚ್ಚಾದರೆ ರಕ್ತದೊತ್ತಡವು ಹೆಚ್ಚಾಗುತ್ತದೆ. ಇದು ಹೃದ್ರೋಗಗಳಿಗೆ ಪ್ರಮುಖ ಕಾರಣವಾಗಿದೆ. ಹಾಗಾಗಿ ಸಂಸ್ಕರಿಸಿದ ಆಹಾರಗಳ ಬದಲು ತಾಜಾ ಹಣ್ಣು, ತರಕಾರಿ ಮತ್ತು ಧಾನ್ಯಗಳ ಸೇವನೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಜೊತೆಗೆ ಅಡುಗೆ ಮಾಡುವಾಗ ಕಡಿಮೆ ಉಪ್ಪನ್ನು ಬಳಸಿ.
ಹಣ್ಣು, ತರಕಾರಿಗಳಸೇವನೆ ಮಾಡಿ;
ನಿಯಮಿತವಾಗಿ ಹಣ್ಣು ಮತ್ತು ತರಕಾರಿಗಳ ಸೇವನೆ ಮಾಡಿ. ಇವು ಜೀವಸತ್ವ, ಖನಿಜ ಮತ್ತು ಫೈಬರ್ ಅಂಶವನ್ನು ಹೊಂದಿರುತ್ತವೆ. ಹೃದಯದ ಆರೋಗ್ಯಕ್ಕೆ ಇವು ಬಹಳ ಮುಖ್ಯ. ಹಾಗಾಗಿ ವೈದ್ಯರು ಪ್ರತಿದಿನ ಕನಿಷ್ಠ ಐದು ರೀತಿಯ ಹಣ್ಣು ಮತ್ತು ತರಕಾರಿಗಳನ್ನು ಸೇವನೆ ಮಾಡಲು ಸೂಚಿಸುತ್ತಾರೆ.
ವ್ಯಾಯಾಮ ಮಾಡುವುದು ಅತ್ಯಗತ್ಯ;
ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಹೃದಯವನ್ನು ಬಲಪಡಿಸುತ್ತದೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವಾಕಿಂಗ್, ಜಾಗಿಂಗ್, ಸೈಕ್ಲಿಂಗ್ ಅಥವಾ ಈಜು ಮುಂತಾದ ವ್ಯಾಯಾಮವನ್ನು ತಪ್ಪದೆ ಮಾಡಿ.
ಶುಂಠಿ ಮತ್ತು ಬೆಳ್ಳುಳ್ಳಿ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಳ್ಳುಳ್ಳಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ. ಶುಂಠಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.
ಒತ್ತಡ ದೇಹಕ್ಕೆ ಒಳ್ಳೆಯದಲ್ಲ;
ನಮ್ಮ ದೇಹಕ್ಕೆ ಒತ್ತಡ ಒಳ್ಳೆಯದಲ್ಲ. ಇದು ಹೃದಯದ ಆರೋಗ್ಯಕ್ಕೆ ಹಾನಿಕಾರಕ. ಒತ್ತಡವನ್ನು ಕಡಿಮೆ ಮಾಡಲು ಯೋಗ, ಧ್ಯಾನ ಅಥವಾ ನಿಮ್ಮ ಆಯ್ಕೆಯ ಇತರ ವಿಶ್ರಾಂತಿ ತಂತ್ರಗಳನ್ನು ಪ್ರಯತ್ನಿಸಿ. ಅದಲ್ಲದೆ ನಕಾರಾತ್ಮಕ ಆಲೋಚನೆಗಳಿಂದ ದೂರವಿರುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಿತ್ತಳೆ ಹಣ್ಣು ಹೃದಯದ ಆರೋಗ್ಯಕ್ಕೆ ಒಳ್ಳೆಯದು;
ಸಾಮಾನ್ಯವಾಗಿ ಕಿತ್ತಳೆಯಲ್ಲಿ ವಿಟಮಿನ್ ಸಿ ಇದೆ. ಈ ಅಂಶ ನಮ್ಮ ರಕ್ತನಾಳಗಳನ್ನು ಬಲಪಡಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ. ಕಿತ್ತಳೆ ಮಾತ್ರವಲ್ಲ ನಿಂಬೆ, ದ್ರಾಕ್ಷಿ ಮತ್ತು ಇತರ ಸಿಟ್ರಸ್ ಹಣ್ಣುಗಳು ಕೂಡ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಸರಿಯಾಗಿ ನಿದ್ರೆ ಮಾಡಿ;
ನಿದ್ರೆಯ ಕೊರತೆಯು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಪ್ರತಿ ದಿನ ರಾತ್ರಿ 7 ರಿಂದ 8 ಗಂಟೆಗಳ ಕಾಲ ಮಲಗುವ ಗುರಿ ಇರಲಿ. ಏಕೆಂದರೆ ಸರಿಯಾದ ನಿದ್ರೆ ದೇಹದ ತೂಕವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ದೀರ್ಘಕಾಲದ ಕಾಯಿಲೆಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ. ಈ ಸಲಹೆಗಳನ್ನು ಸರಿಯಾಗಿ ಅನುಸರಿಸುವ ಮೂಲಕ ನೀವು ನಿಮ್ಮ ಹೃದಯವನ್ನು ಆರೋಗ್ಯಕರವಾಗಿಡಬಹುದು.