ತಿರುವನಂತಪುರ: ಕೇರಳದ ವಯನಾಡಿನಲ್ಲಿ (Wayanad) ಜಲಪ್ರಳಯ ಉಂಟಾಗಿದೆ. ಇಡೀ ಊರಿಗೆ ಊರೇ ಸ್ಮಶಾನವಾಗಿದೆ. ಮನೆ, ಮಠ, ಜೀವ ಎಲ್ಲವು ಕ್ಷಣಾರ್ಧದಲ್ಲಿ ಸಮಾಧಿಯಾಗಿವೆ. ಇಲ್ಲೊಂದು ಊರು ಇತ್ತಾ? ಇಲ್ಲಿ ನೂರಾರು ಜನರು ಬದುಕಿದ್ರಾ ಎಂಬ ಯಾವ ಕುರುಹು ಸಿಗದಂತೆ ಈ ಪ್ರಳಯ ಕ್ಷಣಾರ್ಧದಲ್ಲಿ ಮಾಡಿಟ್ಟಿದೆ. ರಾತ್ರೋರಾತ್ರಿ ಊರಿನ ಶೇ.50 ರಷ್ಟು ಜನ ಜಲ ಸಮಾಧಿಯಾಗಿದ್ದಾರೆ. ಮನೆ, ತೋಟ, ಶಾಲೆ, ದೇವಸ್ಥಾನ, ಮಸೀದಿ ಗಳು ನೀರಿನಲ್ಲಿ ಹೋಮವಾಗಿ ಹೋಗಿವೆ
ಕೇರಳದಲ್ಲಿ ಗುಡ್ಡ ಕುಸಿತ ದುರಂತ: ಇಂದು ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಯನಾಡು ಭೇಟಿ ರದ್ದು
ಇದು ಕೇರಳದ ವಯನಾಡು ಜಿಲ್ಲೆಯ ಮೇಪ್ಪಾಡಿ (Meppadi) ಪಟ್ಟಣದಿಂದ 8 ಕಿ.ಮೀ ದೂರದಲ್ಲಿ ಮುಂಡಕೈ ಎಂಬ ಬೆಟ್ಟದ ತಪ್ಪಲಿನಲ್ಲಿನ ಚೂರಲ್ ಮಲೈ (Chooralmala) (ಮಲಯಾಳಂನಲ್ಲಿ ಚೂರಲ್ ಅಂದರೆ ಬಿದಿರು ಎಂದರ್ಥ) ಗ್ರಾಮದ ಸ್ಥಿತಿ. ಈ ಗ್ರಾಮದಲ್ಲಿ 500 ಮನೆಗಳಿದ್ದವು. ಗ್ರಾಮಕ್ಕೆ ಹೊಂದಿಕೊಂಡಂತೆ ಚೂರಲ್ ಮಲೈ ಎಂಬ ನದಿ ನಿಧಾನವಾಗಿ ಹರಿಯುತ್ತಿತ್ತು. ಮುಂಡಕೈ ಎಂಬ ಬೆಟ್ಟದಿಂದ ಹರಿಯುವ ನೀರಿನಿಂದ ಚೂರಲ್ ಮಲೈ ನದಿ ಸೃಷ್ಟಿಯಾಗಿ ಹರಿಯುತ್ತದೆ. ಇದರ ವೈಭೋಗ ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಆದರೆ ಈಗ ಅದೇ ನದಿ ಯಮ ಸ್ವರೂಪಿಯಾಗಿ ಇಡೀ ಊರನ್ನೇ ಅಹುತಿ ಪಡೆದಿದೆ.
ಹೆಚ್ಚು ಕಡಿಮೆ 300 ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. 150 ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ. ಇದರಲ್ಲಿ ಸದ್ಯಕ್ಕೆ 100 ಜನರ ಮೃತದೇಹ ಪತ್ತೆಯಾಗಿವೆ. ಉಳಿದವರು ಬದುಕಿದ್ದಾರಾ ಜಲ ಸಮಾಧಿಯಾಗಿದ್ದಾರಾ ಗೊತ್ತಿಲ್ಲ. ಅಷ್ಟರಮಟ್ಟಿಗೆ ಈ ನದಿ ಊರನ್ನು ತನ್ನ ಒಡಲಲ್ಲಿ ಸೇರಿಸಿಕೊಂಡು ಕೇಕೆ ಹಾಕಿದೆ.