ಪ್ಯಾರಿಸ್: 2024ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕಾಗಿ ಮೊದಲ ಪದಕ ತಂದುಕೊಟ್ಟ ಮಹಿಳಾ ಶೂಟರ್ ಮನು ಭಾಕರ್ಗೆ (Manu Bhaker) ಪ್ರಧಾನಿ ಮೋದಿ (Narendra Modi) ಅವರು ಖುದ್ದು ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಇದು, ಐತಿಹಾಸಿಕ ಪದಕವಾಗಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ (Paris Olympics 2024) ಮೊದಲ, ಕಂಚಿನ ಪದಕ ಗೆದ್ದಿದ್ದಕ್ಕಾಗಿ ಅಭಿನಂದನೆಗಳು. ಇದು ನಂಬಲಸಾಧ್ಯವಾದ ಸಾಧನೆ ಎಂದೂ ಎಕ್ಸ್ ಖಾತೆಯಲ್ಲಿ ಶ್ಲಾಘಿಸಿದ್ದಾರೆ.
Women’s Air Rifle final: ಭಾರತಕ್ಕೆ ಮೊದಲ ಪದಕ: ಶೂಟಿಂಗ್ʼನಲ್ಲಿ ಐತಿಹಾಸಿಕ ಮೆಡಲ್ ಗೆದ್ದ ಮನು ಭಾಕರ್..!
ಅಷ್ಟೇ ಅಲ್ಲದೇ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ, ಕೇಂದ್ರ ಸಚಿವರಾದ ಅಮಿತ್ ಶಾ, ಕಿರಣ್ ರಿಜಿಜು, ಟೀಂ ಇಂಡಿಯಾ ಮುಖ್ಯಕೋಚ್ ಗೌತಮ್ ಗಂಭೀರ್, ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಮಿತಾಲಿ ರಾಜ್, ವೀರೇಂದ್ರ ಸೆಹ್ವಾಗ್, ಪಂಜಾಬ್ ಸಿಎಂ ಭಗವಂತ್ ಮಾನ್, ಉದ್ಯಮಿ ಆನಂದ್ ಮಹಿಂದ್ರಾ, ಬಾಲಿವುಡ್ ನಟ ಸುನೀಲ್ ಶೆಟ್ಟಿ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಹಿಂದೆ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮನು ಭಾಕರ್ ಅವರಿಗೆ ಸ್ಪರ್ಧೆಯ ವೇಳೆ ಪಿಸ್ತೂಲ್ ಕೈಕೊಟ್ಟಿದ್ದ ಪರಿಣಾಮ 12ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಪ್ರಸಕ್ತ ಟೂರ್ನಿಯಲ್ಲಿ ಫೈನಲ್ ತಲುಪುವ ಮೂಲಕ ವಿಶೇಷ ಸಾಧನೆ ಮಾಡಿದ್ದ ಮನು ಭಾಕರ್ ಭಾನುವಾರ ಪದಕ ಗೆದ್ದುಕೊಂಡಿದ್ದಾರೆ.
ಭಾನುವಾರ ನಡೆದ ಮಹಿಳೆಯರ ಏರ್ಪಿಸ್ತೂಲ್ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಓಹ್ ಯೇ ಜಿನ್ 243.2, ಕಿಮ್ ಯೇಜಿ 241.3 ಅಂಕ ಪಡೆದರೆ, 22 ಶಾಟ್ ಗಳ ಬಳಿಕ ಮನು ಭಾಕರ್ 221.7 ಅಂಕ ಪಡೆದು ಮೂರನೇ ಸ್ಥಾನ ಪಡೆದರು. ಇದರೊಂದಿಗೆ ಶೂಟಿಂಗ್ ವಿಭಾಗದಲ್ಲಿ 12 ವರ್ಷಗಳ ಒಲಿಂಪಿಕ್ಸ್ ಪದಕದ ಬರವನ್ನು ನೀಗಿಸಿದರು. ಸದ್ಯ ಒಂದು ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಭಾರತ 17ನೇ ಸ್ಥಾನದಲ್ಲಿದೆ.