ಬಹು ಸಿಡಿತಲೆಗಳನ್ನು ನಿಯೋಜಿಸುವ ಸಾಮರ್ಥ್ಯವಿರುವ ದೇಶೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿಯ ಮೊದಲ ಪರೀಕ್ಷೆ ಯಶಸ್ವಿಯಾಗಿದೆ. ಒಡಿಶಾ ಕರಾವಳಿ ಪ್ರದೇಶದಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಸೋಮವಾರ ನಡೆದ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ.ಈ ಯಶಸ್ಸಿನ ಹಿಂದೆ ಕ್ಷಿಪಣಿ ತಜ್ಞೆ ಆರ್. ಶೀನಾ ರಾಣಿ ಹೆಸರು ಸಾಕಷ್ಟು ಕೇಳಿ ಬಂದಿದೆ.
ಅಗ್ನಿ-5 ಕ್ಷಿಪಣಿ ಅಭಿವೃದ್ಧಿಪಡಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ಯ ತಂಡದ ಮುಂದಾಳತ್ವವನ್ನು ವಹಿಸಿದವರು ಈ ಶೀನಾ ರಾಣೀ. 57 ವರ್ಷದ ಶೀನಾ ರಾಣಿ ಅವರು ಡಿಆರ್ಡಿಒದ ಹೈದರಾಬಾದ್ ಮೂಲದ ಅಡ್ವಾನ್ಸ್ಡ್ ಸಿಸ್ಟಮ್ಸ್ ಲ್ಯಾಬೋರೇಟರಿ (ಎಎಸ್ಎಲ್)ಯಲ್ಲಿ ಪ್ರೋಗ್ರಾಮ್ ಡೈರೆಕ್ಟರ್ ಆಗಿ ಕ್ಷಿಪಣಿ ಪ್ರಾಜೆಕ್ಟ್ನ ಮುನ್ನಡೆಸಿದರು. ಒಂದೇ ಕ್ಷಿಪಣಿಯು ವಿವಿಧ ಸ್ಥಳಗಳಲ್ಲಿ ಅನೇಕ ಸಿಡಿತಲೆಗಳಿಂದ ಟಾರ್ಗೆಟ್ಗಳನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ. 5000 ಕಿಮೀ ವ್ಯಾಪ್ತಿಯನ್ನು ಹೊಂದಿರುವ ಅಗ್ನಿ-5 ಕ್ಷಿಪಣಿಯನ್ನು ದೇಶದ ದೀರ್ಘಾವಧಿಯ ಭದ್ರತಾ ಅಗತ್ಯಗಳನ್ನು ಪರಿಗಣಿಸಿ ಅಭಿವೃದ್ಧಿಪಡಿಸಲಾಗಿದೆ. ಕ್ಷಿಪಣಿಯು ಚೀನಾದ ಉತ್ತರದ ಭಾಗ ಮತ್ತು ಯುರೋಪಿನ ಕೆಲವು ಪ್ರದೇಶಗಳನ್ನು ಒಳಗೊಂಡಂತೆ ಬಹುತೇಕ ಏಷ್ಯಾವನ್ನು ತಲುಪಬಲ್ಲದು. ಈ ತಂತ್ರಜ್ಞಾನ ಹೊಂದಿರುವ ಕೆಲವೇ ರಾಷ್ಟ್ರಗಳ ಗುಂಪಿಗೆ ಭಾರತ ಸೇರಿಕೊಂಡಿದೆ.
ಇಸ್ರೋದ ವಿಕ್ರಮ್ ಸಾರಾಭಾಯಿ ಬಾಹ್ಯಕಾಶ ಸಂಶೋಧನಾ ಕೇಂದ್ರದಲ್ಲಿ 8 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶೀನಾ ರಾಣಿ, 1999ರಲ್ಲಿ ಡಿಆರ್ಡಿಒಗೆ ಸೇರಿದರು. ಅಂದಿನಿಂದ ದೇಶದ ಅಗ್ನಿ ಕ್ಷಿಪಣಿ ಪ್ರೋಗ್ರಾಮ್ಗಾಗಿ ಕೆಲಸ ಮಾಡುತ್ತಿದ್ದಾರೆ. ಕ್ಷಿಪಣಿ ಪ್ರೋಗ್ರಾಮ್ ಅಡಿಯಲ್ಲಿ ಹಲವಾರು ಅಗ್ನಿ ರೂಪಾಂತರಗಳನ್ನು ಅಭಿವೃದ್ಧಿಪಡಿಲಾಗಿದೆ ಮತ್ತು ಸೇನೆಗೂ ನಿಯೋಜಿಸಲಾಗಿದೆ. ಆದರೂ ಪ್ರಸ್ತುತ MIRV ತಂತ್ರಜ್ಞಾನವು ರಾಣಿ ಅವರಿಗೆ ವೈಭವದ ಕಿರೀಟವೆಂದು ಪರಿಗಣಿಸಲಾಗಿದೆ. ಕ್ಷಿಪಣಿಗಳು ರಾಷ್ಟ್ರದ ಗಡಿಯನ್ನು ರಕ್ಷಿಸುತ್ತಿರುವ ಕಾರಣ ನಾನು ಅಗ್ನಿ ಕ್ಷಿಪಣಿ ಪ್ರೋಗ್ರಾಮ್ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇನೆ ಎಂದು ಶೀನಾ ರಾಣಿ ಹೇಳಿದ್ದಾರೆ.
ರಾಣಿ ಅವರು ಅಗ್ನಿ ಕ್ಷಿಪಣಿಯ ವಿವಿಧ ಸಬ್ಸಿಸ್ಟಮ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿರುವ ಹಲವಾರು ಡಿಆರ್ಡಿಒ ಘಟಕಗಳೊಂದಿಗೆ ಕೆಲಸ ಮಾಡುತ್ತಿದ್ದರೂ, ಕ್ಷಿಪಣಿಗಳ ಉಡಾವಣೆಗೂ ಮುನ್ನ ಅವುಗಳ ಒಟ್ಟಾರೆ ಆರೋಗ್ಯವನ್ನು ಪರಿಶೀಲಿಸುವುದು ಮತ್ತು ಖಚಿತಪಡಿಸಿಕೊಳ್ಳುವುದು ಅವರ ಮುಖ್ಯ ಕೆಲಸವಾಗಿದೆ. ರಾಣಿ ಅವರ ಪತಿ ಪಿ.ಎಸ್. ಆರ್. ಎಸ್. ಶಾಸ್ತ್ರಿ ಅವರು ಕ್ಷಿಪಣಿಗಳಲ್ಲಿ ಡಿಆರ್ಡಿಒ ಜೊತೆ ಕೆಲಸ ಮಾಡಿದ್ದಾರೆ. ರಾಣಿ ಅವರು ಭಾರತದ ‘ಕ್ಷಿಪಣಿ ಮನುಷ್ಯ’ ಮತ್ತು ಮಾಜಿ ಡಿಆರ್ಡಿಒ ಮುಖ್ಯಸ್ಥ ಹಾಗೂ ಭಾರತದ ರಾಷ್ಟ್ರಪತಿ ಎ ಪಿಜೆ ಅಬ್ದುಲ್ ಕಲಾಂ ಅವರಿಂದ ಸ್ಫೂರ್ತಿ ಪಡೆದಿದ್ದಾರೆ. ಕ್ಷಿಪಣಿ ತಂತ್ರಜ್ಞ ಡಾ ಅವಿನಾಶ್ ಚಂದರ್ ಅವರು ಡಿಆರ್ಡಿಒದಲ್ಲಿ ರಾಣಿ ಅವರ ವೃತ್ತಿಜೀವನವನ್ನು ರೂಪಿಸಲು ಸಹಾಯ ಮಾಡಿದರು.
ಡಿಆರ್ಡಿಒ ಅವಧಿಯಲ್ಲಿ ರಾಣಿ ಅವರು 2016 ರಲ್ಲಿ ‘ವರ್ಷದ ವಿಜ್ಞಾನಿ ಪ್ರಶಸ್ತಿ’ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಶೀನಾ ರಾಣಿ ಮುಡಿಗೇರಿದೆ.