ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಲಾಡು ತಯಾರಿಸುವ ಕೋಣೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಮಹದೇಶ್ವರ ದೇಗುಲದ ಹಿಂಭಾಗದಲ್ಲೇ ಇರುವ ಲಾಡು ತಯಾರಿಸುವ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿರುವ ಹಿನ್ನೆಲೆ ಅಲ್ಲಿನ ಸಿಬ್ಬಂದಿ ಹೊರಗೆ ಓಡಿ ಬಂದಿದ್ದಾರೆ. ಸದ್ಯ ಯಾವುದೇ ಪ್ರಾಣಾಪಾಯ ವರದಿಯಾಗಿಲ್ಲ.
ಘಟನೆ ಬಳಿಕ ಪ್ರಾಧಿಕಾರದ ನೌಕರರಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದೆ. ಬೆಂಕಿ ಹೊತ್ತಿಕೊಳ್ಳಲು ಸಿಲಿಂಡರ್ ಕಾರಣವೆಂದು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಎಣ್ಣೆ ಬಾಣಲೆಯಿಂದ ಬೆಂಕಿ ಪ್ರಜ್ವಲಿಸಿ, ಹೆಚ್ಚಿನ ಭಾಗಕ್ಕೆ ಹರಡಿಕೊಂಡಿದೆ. 2 ಟ್ಯಾಂಕರ್ ನೀರಿನ ಮೂಲಕ ಮಹದೇಶ್ವರ ಬೆಟ್ಟದ ಸ್ವಚ್ಚತಾ ಸಿಬ್ಬಂದಿ ಜೊತೆಗೂಡಿ ಬೆಂಕಿ ನಂದಿಸಿದ್ದಾರೆ. ಒಂದು ಭಾಗದ ಗೋಡೆ ಹಾಳಾಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವೆಂದು ಹೇಳಿದ್ದಾರೆ.