6 ಬಾರಿ ಏಕದಿನ ವಿಶ್ವಕಪ್ ಗೆದ್ದು ಬೀಗುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಇದೀಗ ಸಂಕಷ್ಟ ಒಂದು ಎದುರಾಗಿದ್ದು, ತಂಡದ ಪ್ರಮುಖ ಆಟಗಾರನ ವಿರುದ್ಧ FIR ದಾಖಲಾಗಿದೆ.
ಆಸ್ಟ್ರೇಲಿಯಾ ತಂಡದ ಆಟಗಾರ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿಯ ಮೇಲೆ ಕಾಲನ್ನು ಇರಿಸಿ ಫೋಟೋವನ್ನು ತೆಗೆಸಿಕೊಂಡಿದ್ದರು. ಈ ಫೋಟೋವನ್ನು ಸ್ವತಃ ಆಸ್ಟ್ರೇಲಿಯಾ ತಂಡದ ಆಟಗಾರ ಪ್ಯಾಟ್ ಕಮ್ಮಿನ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ದೊಡ್ಡ ಪ್ರಶಸ್ತಿಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಕ್ರೀಡಾಭಿಮಾನಿಗಳು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದೀಗ ವಿಶ್ವಕಪ್ಗೆ ಅಗೌರವ ತೋರಿದ್ಧಾರೆ ಎಂದು ಆರೋಪಿಸಿ ಆಸೀಸ್ ಆಟಗಾರ ಮಿಚೆಲ್ ಮಾರ್ಷ್ ವಿರುದ್ಧ ಉತ್ತರಪ್ರದೇಶದ ಆಲಿಘರ್ನಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ. ಆರ್ಟಿಐ ಕಾರ್ಯಕರ್ತ ಪಂಡಿತ್ ಕೇಶವ್ ಮಿಚೆಲ್ ಮಾರ್ಷ್ ವಿರುದ್ಧ ದೂರು ದಾಖಲಿಸಿದ್ದು, ವಿಶ್ವಕಪ್ ಟ್ರೋಫಿಯ ಮೇಲೆ ಕಾಲಿಡುವ ಮೂಲಕ ಕ್ರೀಡಾಭಿಮಾನಿಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.