ಖ್ಯಾತ ಸಂಗೀತ ಸಂಯೋಜಕ ಎಆರ್ ರೆಹಮಾನ್ ಹಾಗೂ ಅವರ ಪತ್ನಿ ಸೈರಾ ಬಾನು 29 ವರ್ಷಗಳ ದಂಪತ್ಯ ಜೀವನ ಅಂತ್ಯಗೊಳಿಸಿದ್ದಾರೆ. ರೆಹಮಾನ್ ಹಾಗೂ ಸೈರಾ ಬಾನು ವಿಚ್ಛೇದನ ಘೋಷಿಸಿರೋದು ಅನೇಕರಿಗೆ ಶಾಕಿಂಗ್ ಎನಿಸಿದೆ. ಈ ಘೋಷಣೆ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇದೀಗ ವಿಚ್ಛೇದನಕ್ಕೆ ಕಾರಣ ಏನು ಎಂಬುದು ಬಯಲಾಗಿದೆ.
ಕೈತುಂಬ ಕೆಲಸ ಇರುವ ರೆಹಮಾನ್ ವರ್ಷದ ಎಲ್ಲಾ ದಿನಗಳಲ್ಲೂ ಸಖತ್ ಬ್ಯುಸಿಯಾಗಿರ್ತಾರೆ ಅವರು ತಂಡದ ಜೊತೆ ಕಾನ್ಸರ್ಟ್ ನಡೆಸುತ್ತಾರೆ. ಒಂದೊಮ್ಮೆ ಕಾನ್ಸರ್ಟ್ ಇಲ್ಲ ಎಂದಾದರೆ ಹಾಡಿನ ಕಂಪೋಸ್ನಲ್ಲಿ ಬ್ಯುಸಿ ಆಗುತ್ತಾರೆ. ಈ ಕಾರಣಕ್ಕೆ ಅವರು ನಿದ್ರಿಸೋದು ಮುಂಜಾನೆ ವೇಳೆಗೆ. ಅವರು ನಿದ್ದೆಯಿಂದ ಎದ್ದೇಳುವಾಗ ಮಧ್ಯಾಹ್ನ ಆಗುತ್ತದೆ. ಇದು ಅವರ ದಿನಚರಿ. ಈ ಕಾರಣಕ್ಕೆ ಕುಟುಂಬಕ್ಕೆ ಅವರು ಹೆಚ್ಚು ಸಮಯ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದು ವಿಚ್ಛೇದನಕ್ಕೆ ಕಾರಣ ಆಗಿರಬಹುದು ಎಂಬುದು ಕೆಲವರ ವಾದ.
ಸೈರಾ ಬಾನು ಅವರು ವಿಚ್ಛೇದನಕ್ಕೆ ಕಾರಣ ಏನು ಎಂಬ ಬಗ್ಗೆ ಮಾತನಾಡಿದ್ದಾರೆ ಎಂದು ವರದಿ ಆಗಿದೆ. ‘ಸಂಬಂಧದಲ್ಲಿನ ಭಾವನಾತ್ಮಕ ಒತ್ತಡದಿಂದಾಗಿ ವಿಚ್ಛೇದನ ಪಡೆದಿರುವುದಾಗಿ’ ಸೈರಾ ಹೇಳಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ದಂಪತಿ ಕಡೆಯಿಂದ ಯಾವುದೇ ಸ್ಪಷ್ಟ ಹೇಳಿಕೆ ಬಂದಿಲ್ಲ.
ರೆಹಮಾನ್ ಅವರಿಗೆ ಈಗಲೂ ಮಾಜಿ ಪತ್ನಿ ಮೇಲೆ ಗೌರವ ಹಾಗೆಯೇ ಇದೆ ಎನ್ನಲಾಗಿದೆ. ಇವರು ಬರೋಬ್ಬರಿ 29 ವರ್ಷಗಳ ಕಾಲ ಒಟ್ಟಾಗಿ ಸಂಸಾರ ನಡೆಸಿದ್ದರು. ಕಳೆದ ವರ್ಷ ಕಸ್ತೂರಿ ಶಂಕರ್ ಅವರು ಸೈರಾ ಬಾನು ಬಗ್ಗೆ ಟೀಕೆ ಮಾಡಿದ್ದರು. ಅವರಿಗೆ ತಮಿಳು ಬರುವುದಿಲ್ಲ ಎಂದಿದ್ದರು. ಈ ಸಂದರ್ಭದಲ್ಲಿ ಅವರು ಸೈರಾ ಪರ ಮಾತನಾಡಿದ್ದರು.