ಬೆಂಗಳೂರು:- ಅತಿಥಿ ಉಪನ್ಯಾಸಕರ ಮನವಿಗೆ ಸ್ಪಂದಿಸಿರುವ ಸರ್ಕಾರವು ವೇತನ ಹೆಚ್ಚಳ, ಆರೋಗ್ಯ ವಿಮೆ ಸೇರಿದಂತೆ ಕೆಲ ಮಹತ್ವದ ಘೋಷಣೆಗಳನ್ನು ಮಾಡಿದೆ.
ಈ ಸಂಬಂಧ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು, ಅತಿಥಿ ಉಪನ್ಯಾಸಕರ ವೇತನ 5 ಸಾವಿರ ರೂಪಾಯಿ ಹೆಚ್ಚಳಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದು, ಇದೇ ವೇಳೆ ಆರೋಗ್ಯ ವಿಮೆ ಸೇರಿದಂತೆ ಕೆಲ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.
ಅತಿಥಿ ಉಪನ್ಯಾಸಕರು ಕೆಲವು ಬೇಡಿಕೆಗಳನ್ನು ನಮ್ಮ ಮುಂದೆ ಇಟ್ಟಿದ್ದರು. ಸೇವೆ ಕಾಯಂ ಅವರ ಪ್ರಮುಖ ಬೇಡಿಕೆಯಾಗಿದೆ. ಅವರಿಗೆ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ನೀಡಲಾಗುವುದು. ಅವರನ್ನು ಗೌರವದಿಂದ ನಡೆಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ವರ್ಕ್ ಲೋಡ್ ಬಗ್ಗೆಯೂ ಸೂಚನೆ ನೀಡಲಾಗಿದೆ. 60 ವರ್ಷ ಪೂರೈಸಿದ ಅತಿಥಿ ಉಪನ್ಯಾಸಕರು ಕೆಲಸ ಬಿಡುವಾಗ 5 ಲಕ್ಷ ನೀಡಲು ತೀರ್ಮಾನ ಮಾಡಲಾಗಿದೆ. ಅತಿಥಿ ಉಪನ್ಯಾಸಕರಿಗೆ ಆರೋಗ್ಯ ವಿಮೆ ನೀಡಲಾಗುವುದು. ಸಹಾಯಕ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ಪರಿಗಣಿಸಲಿದ್ದು, ಹೊಸದಾಗಿ ನೇಮಕಾತಿ ಸಂದರ್ಭದಲ್ಲಿ ಇವರಿಗೆ ಕೃಪಾಂಕ ನೀಡುವ ಬಗ್ಗೆ ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು