ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾದ ಕಳಸಾ ಬಂಡೂರಿ ಹಾಗೂ
ಮಹದಾಯಿ ಯೋಜನೆ ಜಾರಿಗೆ ಕನ್ನಡ ಚಿತ್ರ ರಂಗ ಒಗ್ಗಟ್ಟಾಗಿ ಹೋರಾಟ ಮಾಡಲಿದೆ ಎಂದು ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ ಹೇಳಿದರು.
ಹ್ಯಾಟ್ರಿಕ್ ಸೋಲು: ಮಗನ ರಾಜಕೀಯ ಭವಿಷ್ಯದ ಬಗ್ಗೆ ಅನಿತಾ ಕುಮಾರಸ್ವಾಮಿ ಭಾವುಕ ಪೋಸ್ಟ್!
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಚಿತ್ರರಂಗ ಬೆಂಬಲ ನೀಡುವುದಿಲ್ಲ ಎಂದು ಭಾವಿಸುವುದು ಬೇಡ. ಉತ್ತರ ಕರ್ನಾಟಕ ಭಾಗದಲ್ಲಿನ ಯಾವುದೇ ಸಮಸ್ಯೆ ಇರಲಿ ಅದನ್ನು ನಾವು ನೀಗಿಸುತ್ತೇವೆ ಎಂದರು.
ಈಗ ಭೈರತಿ ರಣಗಲ್ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮಪ್ತಿಯಲ್ಲಿನ ನನ್ನ ಪಾತ್ರವನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಎಲ್ಲರ ಹೃದಯ ತಲುಪಿದೆ. ಮಪ್ತಿ ಸೀಕ್ವೆಲ್ ಶೀಘ್ರವೇ ಸೆಟ್ಟೇರಲಿದೆ. ಕೌಟುಂಬಿಕ ಕತೆಗಳಿಗಾಗಿ ಪ್ರಯತ್ನ ಮಾಡುವೆ. ಮುಂದಿನ ವಾರ ವಿದೇಶಕ್ಕೆ ತೆರಳುವೆ. ಶಸ್ತ್ರಚಿಕಿತ್ಸೆ ಬಳಿಕ ಚಿತ್ರದ ಮುಹೂರ್ತದ ಬಗ್ಗೆ ಚರ್ಚೆ ಮಾಡಲಿದ್ದೇನೆ. ನಮ್ಮದೇ ಬ್ಯಾನರ್ನಡಿ ‘ಅ ಫಾರ್ ಆನಂದ’ ಚಿತ್ರ ಮೂಡಿಬರಲಿದೆ. ಎಲ್ಲ ತಯಾರಿ ನಡೆದಿದೆ ಎಂದರು.
ಹಾಡು ಹಾಡಿ ರಂಜಿಸಿದ ಶಿವಣ್ಣ:
‘ಭೈರತಿ ರಣಗಲ್’ ಸಿನಿಮಾ ಪ್ರದರ್ಶನ ಕಾಣುತ್ತಿರುವ ಇಲ್ಲಿಯ ಅಪ್ಪರಾ ಚಿತ್ರಮಂದಿರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ತಮ್ಮ ಪತ್ನಿ ಗೀತಾ ಸಮೇತ ಸೋಮವಾರ ಭೇಟಿ ನೀಡಿ, ಶಿವಣ್ಣ ಮಾತನಾಡುವುದರ ಜತೆಗೆ ಹಾಡು ಹಾಡಿ ಜನರನ್ನು ರಂಜಿಸಿದರು.
‘ನಾನಿರುವುದೇ ನಿಮಗಾಗಿ’, ‘ಇವನ್ಯಾರ ಮಗನೋ ಹಿಂಗವಲ್ಲ, ರಾಜಕುಮಾರ ಮಗನೂ ಶಿವರಾಜಕುಮಾರ’, ‘ಬೊಂಬೆ ಹೇಳತೈತಿ ನೀನೇ ರಾಜಕುಮಾರ’ ಎಂಬ ಮೂರು ಗೀತೆಗಳನ್ನು ಹಾಡಿ ನೆರೆದವರವರನ್ನು ಕುಣಿಯುವಂತೆ ಮಾಡಿದರು.
ಇದಕ್ಕೂ ಮೊದಲು ಬಹಿರಂಗವಾಗಿ ಮಾತನಾಡಿದ ಅವರು, ನಿಮ್ಮನ್ನು ನೋಡಿ ಬಹಳ ಖುಷಿಯಾಯಿತು. ವೇದ ಆದ ಮೇಲೆ ಎರಡನೇ ಚಿತ್ರ ಭೈರತಿ ರಣಗಲ್. ಇದರಲ್ಲಿ ನನ್ನದು ಮೆಚ್ಚುವಂಥ ಪಾತ್ರ ಇದೆ. ಧನ್ಯವಾದ ಹೇಳಲು ಇಲ್ಲಿಗೆ ಬಂದಿದ್ದೇನೆ. ನಮಗೂ ಮತ್ತು ಹುಬ್ಬಳ್ಳಿಗೂ ಒಳ್ಳೆಯ ಬಾಂಧವ್ಯ ಇದೆ. ನಮ್ಮ ಅಪ್ಪಾಜಿ ತಾಯಿ ಇಲ್ಲೇ ಇದ್ದರು. ನಾವು ಬೆಳೆದಿದ್ದು ಸಿದ್ದಾರೂಢರ ಮಠದಲ್ಲಿ ಎಂದು ವಿವರಿಸಿದರು.
ಶಿವರಾಜಕುಮಾರ ಅವರು ತೆರೆದ ವಾಹನದ ಮೇಲೆ ನಿಂತು ಅಭಿಮಾನಿಗಳತ್ತ ಕೈ ಬೀಸಿದರು. ವಿಜಯಕುಮಾರ ಅಪ್ಪಾಜಿ ಇತರರು, ಶಿವರಾಜಕುಮಾರ ಅವರಿಗೆ ಬೃಹತ್ ಹಾರ ಹಾಕಿ ಗೌರವಿಸಿದರು. ಅಪ್ಸರಾ ಚಿತ್ರಮಂದಿರದ ಮ್ಯಾನೇಜರ್ ಶಿವಾನಂದ ಸಂಶಿ ಮುಂತಾದವರು ಇದ್ದರು.