ಕೊಡಗು:- ಜಿಲ್ಲೆಯ ಕುಶಾಲನಗರ ತಾಲೂಕಿನ ಆನೆಕಾಡು ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ನಿಂತಿದ್ದ ಕಾರಿನಲ್ಲಿ ವೈದ್ಯ ಹೆಣ ವಾಗಿ ಪತ್ತೆಯಾಗಿರುವಂತಹ ಘಟನೆ ಜರುಗಿದೆ.
ಡಾ.ಸತೀಶ್ ಮೃತ ವೈದ್ಯ. ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಕೇಸ್ನಲ್ಲಿ ಸತೀಶ್ ಹೆಸರು ಕೇಳಿಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಾ.ಸತೀಶ್ನನ್ನು ವಿಚಾರಣೆಗೆ ಕರೆದಿದ್ದರು. ಹೀಗಾಗಿ ಕಾರಿನಲ್ಲಿಯೇ ಇಂಜೆಕ್ಷನ್ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಡಾ ಸತೀಸ್ ಮೂಲತಃ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಶಿವಳ್ಳಿ ಗ್ರಾಮದಲ್ಲಿ ಕ್ಲಿನಿಕ್ ನಡೆಸುತ್ತಿದ್ದರು. ಜೊತೆಗೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಕೊಸನೂರು ಗ್ರಾಮದ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಲೆಮನೆಗೆ ಆರೋಗ್ಯ ಸಚಿವರು ಭೇಟಿ ನೀಡಿದ್ದಾಗ ಸ್ಥಳೀಯರು ಸತೀಶ್ ಬಗ್ಗೆ ಮಾಹಿತಿ ನೀಡಿದ್ದರು. ಡಾ.ಸತೀಶ್ ವಿಚಾರಣೆ ಮಾಡುವಂತೆ ಆರೋಗ್ಯ ಸಚಿವ ಹೇಳಿದ್ದರು. ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿದ್ದು, ಕಾರಿನಲ್ಲಿ ಸಿರೆಂಜ್ ಮತ್ತು ಔಷಧಿ ಡಬ್ಬಿ ಪತ್ತೆಯಾಗಿದೆ.
ಸದ್ಯ ವೈದ್ಯ ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.