ದೇವನಹಳ್ಳಿ:- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಕ್ರಾಸ್ ಬಳಿ ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ವೈದ್ಯ ಶ್ರೀನಿವಾಸ್ಗೆ ಸೇರಿದ SPG ಆಸ್ಪತ್ರೆ, ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ ದಾಖಲಾತಿ ಪರಿಶೀಲನೆಗೆ ಬಂದಿದ್ದ ವೇಳೆ ಲೈವ್ನಲ್ಲಿ ಭ್ರೂಣ ಹತ್ಯೆ ಪತ್ತೆ ಆಗಿದೆ. ಆಸ್ಪತ್ರೆಯಲ್ಲಿ 5 ತಿಂಗಳ ಗರ್ಭಿಣಿಗೆ ಗರ್ಭಪಾತ ಮಾಡಿ ಭ್ರೂಣ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಕಳೆದ 1 ವಾರದಿಂದ ಆಸ್ಪತ್ರೆ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ವೇಳೆ ಹಲವು ದಾಖಲೆಗಳ ಬಗ್ಗೆ ಆರೋಗ್ಯ ಅಧಿಕಾರಿಗಳಿಗೆ ಅನುಮಾನ ಬಂದಿದ್ದರಿಂದ ಹೀಗಾಗಿ ಇಂದು ಮತ್ತೊಮ್ಮೆ ಪರಿಶೀಲನೆಗೆ ಅಧಿಕಾರಿಗಳ ತಂಡ ಆಗಮಿಸಿದೆ.
ಕೂಡಲೇ ಅಲರ್ಟ್ ಆದ ಅಧಿಕಾರಿಗಳಿಂದ ಮತ್ತಷ್ಟು ತೀವ್ರ ತನಿಖೆ ಮಾಡಲಾಗಿದ್ದು, ಸ್ಥಳಕ್ಕೆ ರಾಜ್ಯ ಆರೋಗ್ಯ ಇಲಾಖೆಯ ನೋಡಲ್ ಅಧಿಕಾರಿ ವಿವೇಕ್ ದೊರೆ ಹಾಗೂ ಶ್ರೀನಿವಾಸ್ ಭೇಟಿ ನೀಡಿದ್ದು, ಆಸ್ಪತ್ರೆಯಲ್ಲಿನ ಸಂಪೂರ್ಣ ದಾಖಲೆ ಪರಿಶೀಲಿಸಿದ್ದಾರೆ.
2 ದಿನದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ಖಾಸಗಿ ಕ್ಲಿನಿಕ್ನಲ್ಲಿ ಅಕ್ರಮ ಸ್ಕ್ಯಾನಿಂಗ್ ಮಿಷನ್ ಪತ್ತೆ ಆಗಿದೆ. ಕೆಪಿಎಂಇ ಆಕ್ಟ್ ಪಾಲನೆ ಬಗ್ಗೆ ಪರಿಶೀಲನೆಗೆ ಬಂದಿದ್ದ ವೇಳೆ ಮಿಷನ್ ಪತ್ತೆಯಾಗಿದೆ. ಸ್ಕ್ಯಾನಿಂಗ್ ಮಿಷನ್ ಹಿನ್ನೆಲೆ ಹುಡುಕಿ ಹೊರಟಾಗ ಭ್ರೂಣ ಹತ್ಯೆ ಬಯಲಾಗಿದೆ.
ರಿಜಿಸ್ಟರ್ ಮಾಡಿಸದೆ ಅಕ್ರಮವಾಗಿ ಸ್ಕ್ಯಾನಿಂಗ್ ಮಿಷನ್ ಇಟ್ಟುಕೊಂಡಿದ್ದರು. ಹೀಗಾಗಿ ಸ್ಕ್ಯಾನ್ ಬಗ್ಗೆ ಇಂದು ಅಧಿಕಾರಿಗಳು ಪರಿಶೀಲನೆಗೆ ಬಂದಿದ್ದರು. ಈ ವೇಳೆ ಆಪರೇಷನ್ ಥಿಯೇಟರ್ನಲ್ಲಿ 16 ವಾರದ ಹೆಣ್ಣು ಭ್ರೂಣ ಪತ್ತೆಯಾಗಿದೆ. ಬೆಳಗ್ಗೆಯಷ್ಟೇ ಭ್ರೂಣಹತ್ಯೆ ಮಾಡಿ ಕವರನಲ್ಲಿ ಸುತ್ತಿಟ್ಟಿದ್ದಾರೆ. ಹೀಗಾಗಿ ಭ್ರೂಣವನ್ನ ವಶಪಡಿಸಿಕೊಂಡು ಅಧಿಕಾರಿಗಳಿಂದ ತನಿಖೆ ಮಾಡಲಾಗುತ್ತಿದೆ. ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಗೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಯಿಂದ ದೂರು ನೀಡಲಾಗಿದೆ.
ಭ್ರೂಣ ಹತ್ಯೆ ಹಿನ್ನೆಲೆ ಎಸ್ಪಿಜಿ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಆಸ್ಪತ್ರೆ ಸೀಜ್ ಮಾಡಲು ತಯಾರಿ ಮಾಡಲಾಗುತ್ತಿದೆ. ಸದ್ಯ ಎಸ್ಪಿಜಿ ಆಸ್ಪತ್ರೆಯಲ್ಲಿನ ರೋಗಿಗಳನ್ನು ಅವರಿಗೆ ಬೇಕಾದ ಆಸ್ಪತ್ರೆಗಳಿಗೆ ಸಿಬ್ಬಂದಿ ಕಳಿಹಿಸಿದ್ದಾರೆ. ಮಕ್ಕಳ ಜೊತೆ ಆಟೋ, ಬೈಕ್ನಲ್ಲಿ ರೋಗಿಗಳು ಬೇರೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಭ್ರೂಣ ಹತ್ಯೆ ಪ್ರಕರಣ ಬಯಲಾಗುತ್ತಿದ್ದಂತೆ ವೈದ್ಯ ಶ್ರೀನಿವಾಸ್ ಪರಾರಿ ಆಗಿದ್ದಾರೆ.