ಬೆಂಗಳೂರು: ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮದಿಂದ ಕರ್ನಾಟಕದಲ್ಲೂ ಮಳೆಯಬ್ಬರ ಜೋರಾಗಿದೆ. ಮಂಗಳವಾರವೂ ಕೂಡ ಮಳೆಯ ಆರ್ಭಟ ಜೋರಾಗಿದ್ದು, ಇಂದು ರಾಜ್ಯದಲ್ಲಿನ 12 ಜಿಲ್ಲೆಗಳಲ್ಲಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇನ್ನೂ ನಾಳೆಯೂ ಕೂಡ ಇದೇ ರೀತಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲೂ ಇನ್ನೆರಡು ದಿನ ಮಳೆ ಹೆಚ್ಚಾಗಲಿದೆ. ಕರಾವಳಿಯಲ್ಲಿ ಈಗಾಗಲೇ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ನಾಳೆ ಸಹ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯ ಸಾಧ್ಯತೆಯಿದೆ. ಹೀಗಾಗಿ, ಹಳದಿ ಅಲರ್ಟ್ ಘೋಷಿಸಲಾಗಿದೆ.
ಡಿಸೆಂಬರ್ 5 ಮತ್ತು 6ರಂದು ರಾಜ್ಯದ ಹಲವೆಡೆ ಅಲ್ಲಲ್ಲಿ ಮಳೆ ಆಗಲಿದೆ. ಆದರೆ ನಾಳೆ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 24, ಕನಿಷ್ಠ ಉಷ್ಣಾಂಶ 19 ಇರಲಿದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಮಂಗಳವಾರ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆಯಾಗಿದೆ. ಮಂಡ್ಯ ಜಿಲ್ಲೆಯ ಬೆಳ್ಳೂರು ಹಾಗೂ ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ತಲಾ 9 ಸೆಂಟಿ ಮೀಟರ್, ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ 6 ಸೆಂಟಿ ಮೀಟರ್ ಮಳೆ ಆಗಿದೆ.
ಫೆಂಗಲ್ ಚಂಡಮಾರುತದ ಎಫೆಕ್ಟ್ : ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ಮಳೆ ನೀರು
ಅರಬ್ಬೀ ಸಮುದ್ರದ ಆಗ್ನೇಯ ಹಾಗೂ ಕರ್ನಾಟಕದ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಇಂದು, ನಾಳೆ ವ್ಯಾಪಕ ಮಳೆಯಾಗಲಿದೆ ಮುನ್ಸೂಚನೆ ನೀಡಿದೆ. ಡಿ.4ರಂದು ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ನಾಳೆ ಹಳದಿ ಅಲರ್ಟ್ ಘೋಷಿಸಲಾಗಿದೆ. ಡಿ. 5 ಮತ್ತು 6ರಂದು ಈ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.