ಮಂಗಳೂರು: ಪಕ್ಷದವರು ನಮ್ಮ ಬಳಿ ಗುಡಿಸು ಎಂದರೆ ಗುಡಿಸುತ್ತೇವೆ, ಎಂದು ಟಿಕೆಟ್ ಕೈತಪ್ಪುವ ಸುಳಿವು ದೊರೆತ ಬಳಿಕ ಭಾವುಕರಾದ ನಳಿನ್ ಕುಮಾರ್ ಕಟೀಲ್
ಕಳೆದ 15 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಸೋಲಿಲ್ಲದ ಸರದಾರ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂದು ತಿಳಿದಿದೆ. ಈ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಸಿರುವ ಸಂಸದರು ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸುವುದು ನಮ್ಮ ಪಕ್ಷದ ವಿಶೇಷತೆ. ಪಕ್ಷದ ರಾಷ್ಟ್ರೀಯ ನಾಯಕರು ಎಲ್ಲಾ ಯೋಚನೆ ಮಾಡಿ ಆಯ್ಕೆ ಮಾಡುತ್ತಾರೆ. ಅವರ ಆಯ್ಕೆಯನ್ನು ಸ್ವಾಗತಿಸುತ್ತೇನೆ ಎಂದರು.
ಬದಲಾವಣೆ ಜಗದ ನಿಯಮ ಹೊಸಬರು ಬರುತ್ತಾ ಇರಬೇಕು. ಚಲಾವಣೆ ಆಗುತ್ತಾ ಇರಬೇಕು. ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ನಾವೆಲ್ಲಾ ಬದ್ಧರಾಗಿರುತ್ತೇವೆ. ಯಾರೇ ಅಭ್ಯರ್ಥಿ ಆದರೂ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬುದು ನಮ್ಮ ಗುರಿ ಎಂದರು.
Lok Sabha Elections 2024: ಪ್ರಧಾನಿ ಮೋದಿ ಕರ್ನಾಟಕ ಭೇಟಿಗೆ ದಿನಾಂಕ ಫಿಕ್ಸ್: ಈ ಕ್ಷೇತ್ರಗಳೇ ಬಿಗ್ ಟಾರ್ಗೆಟ್!
ಪಕ್ಷದವರು ನಮ್ಮ ಬಳಿ ಗುಡಿಸು ಎಂದರೆ ಗುಡಿಸುತ್ತೇವೆ. ಒರೆಸು ಎಂದು ಹೇಳಿದರೆ ಒರೆಸುತ್ತೇವೆ. ನಮಗೆ ಅಧಿಕಾರವೇ ಪ್ರಾಮುಖ್ಯ ಅಲ್ಲ. ಏನು ಬದಲಾವಣೆ ಮಾಡಬೇಕೋ ಅದನ್ನು ರಾಷ್ಟ್ರೀಯ ನಾಯಕರು ಮಾಡುತ್ತಾರೆ ಎಂದು ಪಕ್ಷವು ನಿಂತ ನೀರಾಗಬಾರದು. ರಾಷ್ಟ್ರೀಯ ನಾಯಕರ ಯೋಚನೆಗಳಿಗೆ ಬದ್ಧರಾಗಿ ಕೆಲಸ ಮಾಡುವವರು ನಾವು ಎಂದು ನಳಿನ್ ಹೇಳಿದರು.
ಸಾಮಾಜಿಕ ಜಾಲತಾಣಗಳ ಚರ್ಚೆ ಬಗ್ಗೆ ನಾನು ಹೆಚ್ಚು ತಲೆಕಡಿಸಿಕೊಳ್ಳುವುದಿಲ್ಲ.ನಾವು ಪಕ್ಷ ಏನೇ ಹೇಳಿದರೂ ಮಾಡುತ್ತೇವೆ ,ನಾನು ತಳ ಮಟ್ಟದ ಕಾರ್ಯಕರ್ತನಾಗಿ ಬೆಳೆದು ಬಂದವನು ಹಿಂದುತ್ವದ ಸಿದ್ದಾಂತವನ್ನು ಪ್ರತಿಪಾದಿಸಿ ಬಂದವನು ನನಗೂ ಮೂರು ಬಾರಿ ಅವಕಾಶ ನೀಡಿದ್ದಾರೆ. ಹದಿನೈದು ವರ್ಷ ಕೆಲಸ ಮಾಡಿದ್ದೇನೆ. ನಮ್ಮ ಪಾರ್ಟಿಯಲ್ಲಿ ತುಳಿಯುವ ಕೆಲಸ ಆಗಲ್ಲ.ಸಂಘದ ಕಾರ್ಯಕ್ಕೋಸ್ಕರ ಬಂದಿದ್ದು. ಬಿಜೆಪಿ ಕೆಲಸ ಮಾಡು ಎಂದಾಗ ಮಾಡಿದೆ. ಲೋಕಸಭೆ ಚುನಾವಣೆಗೆ ನಿಲ್ಲು ಎಂದರು, ಸ್ಪರ್ಧಿಸಿದೆ. ಆ ಬಳಿಕ ರಾಜ್ಯಾಧ್ಯಕ್ಷನೂ ಆದೆ. ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ,ಅವಕಾಶ ಸಿಕ್ಕಿಲ್ಲ ಅಂದಾಗ ಅನ್ಯಾಯ ಆಗಿದೆ ಎಂದು ಹೇಳುವ ಹಕ್ಕು ನಮಗಿಲ್ಲ. ಎಲ್ಲರನ್ನೂ ಪಾರ್ಟಿ ಬೆಳೆಸಿದೆ. ಟಿಕೆಟ್ ಸಿಕ್ಕಿಲ್ಲ ಎಂದ ಕೂಡಲೇ ಅಂಥವರನ್ನು ಕೈಬಿಟ್ಟಿದೆ ಎಂದು ಅರ್ಥ ಅಲ್ಲ. ಮುಂದಕ್ಕೆ ಬಹಳಷ್ಟು ಅವಕಾಶ ಸಿಗಬಹುದು. ಪಕ್ಷದ ಕೆಲಸ ಮಾಡೋದಕ್ಕೂ ಜನ ಬೇಕಲ್ಲ. ಈ ಬಗ್ಗೆ ಯೋಚನೆ ಮಾಡಿಕೊಂಡೇ ರಾಷ್ಟ್ರೀಯ ನಾಯಕರು ಪಟ್ಟಿ ಘೋಷಣೆ ಮಾಡುತ್ತಾರೆ ನನಗೆ ಯಾವುದೇ ಅಸಮಾಧಾನ ಇಲ್ಲ ಎಂದು ಭಾವುಕರಾದರು.