ನಂದಮೂರಿ ಬಾಲಕೃಷ್ಣ ನಿರೂಪಣೆಯಲ್ಲಿ ಪ್ರಸಾರವಾಗುತ್ತಿರುವ ‘ಅನ್ಸ್ಟಾಪಬಲ್’ ಶೋ ಸಾಕಷ್ಟು ಖ್ಯಾತಿ ಘಳಿಸಿದರು. ಈಗಾಗಲೇ ಈ ಸೀಸನ್ನಲ್ಲಿ ಅನೇಕ ಸ್ಟಾರ್ ಹೀರೋಗಳು ಮತ್ತು ನಿರ್ದೇಶಕರು ಭಾಗವಹಿಸಿದ್ದು ಶೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವಾರ ಶೋನಲ್ಲಿ ಭಾಗವಹಿಸಿದ್ದ ನಟ ವಿಕ್ಟರಿ ವೆಂಕಟೇಶ್ ಕೆಲವೊಂದು ಸಂದರ್ಭದಲ್ಲಿ ಭಾವುಕರಾಗಿದ್ದಾರೆ.
ವೆಂಕಟೇಶ್ ಎಪಿಸೋಡ್ ಪ್ರಸ್ತುತ ಆಹಾದಲ್ಲಿ ಪ್ರಸಾರವಾಗುತ್ತಿದೆ. ಈ ಸಂಚಿಕೆಯಲ್ಲಿ ಬಾಲಕೃಷ್ಣ ಅವರು ವೆಂಕಟೇಶ್ ಅವರಿಗೆ ಕೆಲವೊಂದು ತಮಾಷೆ ಪ್ರಶ್ನೆಗಳನ್ನು ಕೇಳಿದ್ದಾರೆ. ಬಾಲಯ್ಯ ಕೇಳಿದ ಪ್ರಶ್ನೆಗಳಿಗೆ ವೆಂಕಟೇಶ್ ಕಾಮಿಡಿಯಾಗಿಯೇ ಉತ್ತರ ನೀಡಿದ್ದಾರೆ. ಚಿತ್ರದ ಜೊತೆಗೆ ವೆಂಕಟೇಶ್ ವೈಯಕ್ತಿಕ ವಿಚಾರಗಳು, ಕೌಟುಂಬಿಕ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ. ಅಲ್ಲದೆ, ಈ ಸಂಚಿಕೆಯಲ್ಲಿ ಕೆಲವು ಭಾವನಾತ್ಮಕ ಸಂಭಾಷಣೆಗಳೂ ನಡೆದವು. ವೆಂಕಟೇಶ್ ಜೊತೆಗೆ ಅವರ ಸಹೋದರ ಸುರೇಶ್ ಬಾಬು ಕೂಡ ಬಾಲಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಾಲಯ್ಯ ಕಾರ್ಯಕ್ರಮದಲ್ಲಿ ವೆಂಕಟೇಶ್ ತಮ್ಮ ತಂದೆ ಲೆಜೆಂಡರಿ ಪ್ರೊಡ್ಯೂಸರ್ ರಾಮನಾಯ್ಡು ಬಗ್ಗೆ ಮಾತನಾಡಿ ಭಾವುಕರಾದರು. ಬಾಲಕೃಷ್ಣ ರಾಮನಾಯ್ಡು ಬಗ್ಗೆ ಕೇಳಿದಾಗ ವೆಂಕಟೇಶ್ ಮತ್ತು ಸುರೇಶ್ ಬಾಬು ರಾಮನಾಯ್ಡು ಅವರ ಕೊನೆಯ ದಿನಗಳನ್ನು ನೆನಪಿಸಿಕೊಂಡರು. ‘ನಮ್ಮ ತಂದೆಯಿಂದಲೇ ನಾವು ಇಲ್ಲಿದ್ದೇವೆ. ಅವರು ತಮ್ಮ ಇಡೀ ಜೀವನವನ್ನು ಸಿನಿಮಾಗಳಿಗೆ ನೀಡಿದರು. ಅಲ್ಲದೆ, ಕುಟುಂಬ ಮತ್ತು ಚಲನಚಿತ್ರವನ್ನು ಸಮತೋಲನಗೊಳಿಸಿದರು’ ಎಂದು ನಟ ವೆಂಕಟೇಶ್ ಹೇಳಿದರು.
‘ಕೊನೆಯ ದಿನಗಳಲ್ಲೂ ಸಿನಿಮಾ ಸ್ಕ್ರಿಪ್ಟ್ ಓದುತ್ತಿದ್ದರು. ಅವರಿಗೆ ಒಂದು ಕಥೆ ಇಷ್ಟವಾಗಿದ್ದು, ಈ ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಎಂದು ಹೇಳಿದ್ದರು. ಆ ಕಥೆಯಲ್ಲಿ ನನ್ನ ಜೊತೆ ನಟಿಸೋಣ ಎಂದುಕೊಂಡರು. ಆದರೆ ಆಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹಾಗಾಗಿ ಆ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ನಮಗೆ ತುಂಬಾ ಬೇಸರವಾಗಿದ್ದು, ಸಿನಿಮಾ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಕೊನೆಯ ದಿನಗಳಲ್ಲೂ ಅವರು ಸಿನಿಮಾಗಾಗಿ ಬದುಕಿದ್ದರು’ ಎಂದು ಭಾವುಕರಾದರು.