ಬೆಂಗಳೂರು:- ರೈತರಿಗೆ ಸೂಕ್ತ ಸಮಯದಲ್ಲಿ ಬರ ಪರಿಹಾರ ಸಿಗದಿದ್ದರೆ ಜಿಲ್ಲಾಧಿಕಾರಿಗಳೇ ಹೊಣೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ವಿಡಿಯೋ ಕಾನ್ಪರೆನ್ಸ್ ಮೂಲಕ ಜಿಲ್ಲಾಧಿಕಾರಿಗಳ ಸಭೆ ನಡೆಸಿದ ಸಚಿವ ಕೃಷ್ಣ ಬೈರೇಗೌಡ, ರೈತರ ಜಮೀನಿನ ಸಂಪೂರ್ಣ ವಿಸ್ತೀರ್ಣವನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸುವಂತೆ ಕಳೆದ ಎರಡು ತಿಂಗಳಿನಿಂದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರಂತರವಾಗಿ ಸೂಚಿಸಲಾಗುತ್ತಿದೆ. ಆದರೂ, ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಜಮೀನಿನ ಮಾಹಿತಿ ಶೇ.70ನ್ನೂ ಮೀರಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ರೈತರಿಗೆ ಅನ್ಯಾಯವಾಗಲಿದೆ ಎಂದು ಅಸಮಾಧಾನ ಹೊರಹಾಕಿದರು.
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿನ ಸಾಧನೆ ತೀರಾ ಕಳಪೆಯಾಗಿದೆ. ಬರ ಪರಿಹಾರ ಹಣ ನೀಡಲು ರಾಜ್ಯ ಸರ್ಕಾರದ ಸಿದ್ದವಾಗಿದೆ. ಖಜಾನೆಯಲ್ಲಿ ಹಣವೂ ಇದೆ. ಆದರೆ, ಪರಿಹಾರ ಫ್ರೂಟ್ಸ್ ದತ್ತಾಂಶವನ್ನು ಆಧರಿಸಿರುವ ಕಾರಣ ಜಿಲ್ಲಾಧಿಕಾರಿಗಳು ಮಾಡುವ ಸಣ್ಣ ತಪ್ಪೂ ಸಹ ರೈತರ ಮೇಲೆ ಪರಿಣಾಮ ಬೀರಲಿದೆ. ಶೀಘ್ರದಲ್ಲಿ ತಾಲೂಕು ಹೋಬಳಿ ಸಭೆ ನಡೆಸಿ ಎಲ್ಲಾ ಅಧಿಕಾರಿಗಳನ್ನು ಸ್ಥಳ ವೀಕ್ಷಣೆಗೆ ಕಳುಹಿಸಿ ಡಿಸೆಂಬರ್ 22ರ ಒಳಗಾಗಿ ರೈತರ ಜಮೀನಿನ ಸಂಪೂರ್ಣ ಮಾಹಿತಿಯನ್ನು ನಮೂದಿಸಿ ಎಂದು ಸಮಯದ ಗಡುವು ನೀಡಿದರು.