ದಾವಣಗೆರೆ: ತರಿಕೆರೆ ಹಾಗೂ ಕಡೂರು ಭಾಗಕ್ಕೆ ಶಿವಮೊಗ್ಗದ ಭದ್ರಾ ಜಲಾಶಯದಿಂದ ನೀರನ್ನು ಹರಿಸಲು ಆದೇಶ ಮಾಡಿರುವುದನ್ನ ಖಂಡಿಸಿ ಇಂದು ದಾವಣಗೆರೆಯಲ್ಲಿ ಭಾರತೀಯ ರೈತ ಒಕ್ಕೂಟದ ಮುಖಂಡರು ಪ್ರತಿಭಟನೆಯನ್ನ ನಡೆಸಿದ್ದಾರೆ. ದಾವಣಗೆರೆಯ ನೀರಾವರಿ ಇಲಾಖೆಯ ಎಇಇ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಭಾರತೀಯ ರೈತ ಒಕ್ಕೂಟದ ಮುಖಂಡರು,
ಭದ್ರಾ ಸೂಪರಿಟೆಂಡೆಂಟ್ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದರು. ಬಳಿಕ, ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿಯನ್ನ ಸಲ್ಲಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯಡಿ ತರೀಕೆರೆ ಏತ ನೀರಾವರಿ ಯೋಜನೆ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನು ಒದಗಿಸಲು ಅನುವಾಗುವಂತೆ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಯ ಮೂಲಕ ವಾಣಿ ವಿಲಾಸ ಸಾಗರಕ್ಕೆ ನೀರನ್ನು ಹರಿಸಲು ಅನುವಾಗುವಂತೆ ಭದ್ರಾ ಜಲಾಶಯದ ನೀರನ್ನು ಒಳಹರಿವಿನ ಪ್ರಮಾಣ ಹೆಚ್ಚಾದ ನಂತರ ಮತ್ತು ನೀರಿನ ಲಭ್ಯತೆ ನೋಡಿಕೊಂಡು ನೀರು ಹರಿಸಬೇಕು ಎಂದು ಸರ್ಕಾರದ ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಆದೇಶ ನೀಡಿದ್ದಾರೆ.
ಆದರೆ ಭದ್ರಾ ಸೂಪರಿಂಟೆಂಡೆಂಟ್ ಇಂಜಿನಿಯರ್ ತರೀಕೆರೆ ಮತ್ತು ಕಡೂರು ಭಾಗದ ರೈತರ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಬವಣೆಯನ್ನು ನೀಗಿಸುವ ಸಲುವಾಗಿ ಎಂದು ಕಾರಣ ನೀಡಿ, ಡಿಸೆಂಬರ್ 29 ರಿಂದ ಪ್ರತಿ ದಿನ 700 ಕ್ಯೂಸೆಕ್ಸ್ ನಂತೆ 4 ದಿನ ನೀರು ಬಿಡುವುದಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬಹಳ ಅನ್ಯಾಯವಾಗುತ್ತದೆ. ಹೀಗಾಗಿ, ಆದೇಶ ರದ್ದು ಮಾಡುವಂತೆ ರೈತರು ಒತ್ತಾಯವನ್ನ ಮಾಡಿದ್ದಾರೆ.