ಬೆಂಗಳೂರು/ಬೆಳಗಾವಿ:- ಬೆಳೆಹಾನಿಗೆ 2 ಸಾವಿರ ರೂ.ಗಳ ಮೊದಲ ಕಂತು ಮುಂದಿನ ವಾರ ಪಾವತಿ ಮಾಡಲಾಗುತ್ತದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವರ್ಷ ಬರ ಜನರಿಗೆ ಬಾಧೆಯಾಗುತ್ತಿದೆ, ಸರ್ಕಾರ ಏನೆಲ್ಲಾ ಮಾಡಬೇಕೋ ಅದನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಸಿಎಂ ಅಧ್ಯಕ್ಷತೆಯಲ್ಲಿ ರಾಜ್ಯ ವಿಪತ್ತು ಪ್ರಾಧಿಕಾರ ಮೂರು ಸಭೆ ಮಾಡಿದೆ, ಸಂಪುಟ ಉಪ ಸಮಿತಿ ಇದೆ, 10 ಸಭೆ ಬರದ ಸಲುವಾಗಿ ಮಾಡಿದ್ದೇವೆ. ದೇಶದ 12 ರಾಜ್ಯಗಳಲ್ಲಿ ಮುಂಗಾರು ಅವಧಿಯ ಬರಗಾಲ ಇದೆ, 18 ರಾಜ್ಯಗಳಲ್ಲಿ ಹಿಂಗಾರು ಅವಧಿಯಲ್ಲಿ ಬರಗಾಲ ಆವರಿಸಿದೆ. ಮುಂಗಾರು ಅವಧಿಯಲ್ಲಿ ಸೆಪ್ಟಂಬರ್ 13 ರಂದೇ ರಾಜ್ಯದಲ್ಲಿ ಬರಗಾಲ ಘೋಷಣೆ ಆಗಿತ್ತು. ಬೇರೆ ರಾಜ್ಯಗಳು ನಾವು ಘೋಷಿಸಿದ 2 ತಿಂಗಳ ನಂತರ ಘೋಷಣೆ ಮಾಡಿವೆ, ಇತರ ರಾಜ್ಯಕ್ಕೂ ಮೊದಲು ನಾವಿದ್ದೇವೆ. ಸೆಪ್ಟಂಬರ್ 22 ರಂದು ಮೊದಲ ಮನವಿಯನ್ನು ಕೇಂದ್ರಕ್ಕೆ ಮಾಡಿದ್ದೇವೆ. ಮೇವಿನ ಕೊರತೆ ಬರಬಹುದು ಎಂದು 7 ಲಕ್ಷ ಬಿತ್ತನೆ ಬೀಜದ ಕಿಟ್ ಗಳನ್ನು ಬರಪೀಡಿತ ತಾಲ್ಲೂಕುಗಳಲ್ಲಿ ರೈತರಿಗೆ ಕೊಟ್ಟಿದ್ದೇವೆ. 90 ವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಅದರಲ್ಲಿ 60 ಕಡೆ ಖಾಸಗಿ ಬೋರ್ವೆಲ್ ಬಾಡಿಗೆ ಪಡೆದಿದ್ದು, 25 ಕಡೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಚಿತ್ರದುರ್ಗ ಸೇರಿ ಕೆಲವಡೆ ಹೆಚ್ಚಿನ ಸಮಸ್ಯೆ ಇದೆ, ಅಲ್ಲಿ ಗೋಶಾಲೆ ಆರಂಭಕ್ಕೆ ಸೂಚಿಸಲಾಗಿದೆ. ಜಿಲ್ಲಾಡಳಿತಗಳ ಬಳಿ 894 ಕೋಟಿ ಹಣವನ್ನು ಸಿದ್ಧವಿಟ್ಟಿದ್ದೇವೆ, ಕುಡಿಯುವ ನೀರಿನ ಸಮಸ್ಯೆ ಆದ 24 ಗಂಟೆಯ ಒಳಗೆ ಟ್ಯಾಂಕರ್ ಮೂಲಕವಾದರೂ ಪೂರೈಸಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದೇವೆ ಎಂದು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು.
![Demo](https://ainlivenews.com/wp-content/uploads/2023/12/spoorthi-1.jpg)
ರಾಜ್ಯದ ರೈತರ ಸ್ಥಿತಿಗತಿ ಕಷ್ಟವಿದೆ, ರಾಜ್ಯಕ್ಕೆ ಬರಬೇಕಾದ ಹಣ ಬೇಗ ಬಿಡುಗಡೆ ಮಾಡಿ ಎಂದು ಮನವಿ ಮಾಡಿದ್ದೆವು, ಅವರು ಇನ್ನು ತೀರ್ಮಾನ ಮಾಡದ ಕಾರಣ ಭಾಗಶಃ ಪರಿಹಾರವಾಗಿ 2 ಸಾವಿರ ರೂ.ಗಳ ಹಣವನ್ನು ಕೊಡಲು ಸಿಎಂ ತೀರ್ಮಾನಿಸಿದ್ದಾರೆ. ಡಿಬಿಟಿ ಮೂಲಕ ಮುಂದಿನ ವಾರ ಭಾಗಶಃ ಪರಿಹಾರದ ಮೊದಲ ಕಂತನ್ನು ಹಾಕಲಿದ್ದು, ಕೇಂದ್ರದಿಂದ ಪರಿಹಾರದ ಹಣ ಬರುತ್ತಿದ್ದಂತೆ ಬಾಕಿ ಪರಿಹಾರದ ಹಣ ಜಮೆ ಮಾಡಲಾಗುತ್ತದೆ. ಪರಿಹಾರದ ಹಣ ಕಡಿಮೆ ಎನ್ನುವುದು ನಿಜ ಎಂದಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)