ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾದ ಪ್ರೀಮಿಯರ್ ವೇಳೆ ನಡೆದ ಕಾಲ್ತುಳಿತದಲ್ಲಿ ಮಹಿಳೆ ಸಾವು ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಘಟನೆಯ ಬಳಿಕ ಚಿತ್ರತಂಡಕ್ಕೆ ಭಯ ಶುರುವಾಗಿದೆ. ಅಭಿಮಾನಿಗಳ ಸಾವನ್ನು ನಿರ್ಮಾಪಕರು ಹಾಗೂ ತಂಡದವರು ಗಂಭೀರವಾಗಿ ಸ್ವೀಕರಿಸುತ್ತಿದೆ. ಇದೀಗ ಗೇಮ್ ಚೇಂಜರ್ ಸಿನಿಮಾ ತಂಡ ಅಭಿಮಾನಿಗಳ ಸಾವಿಗೆ ಪರಿಹಾರ ಘೋಷಿಸಿದೆ.
ಆಂಧ್ರ ಪ್ರದೇಶದ ರಾಜಮಹೇಂದ್ರವರಂನಲ್ಲಿ ಶನಿವಾರ (ಜನವರಿ 4) ಗೇಮ್ ಚೇಂಜರ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿತ್ತು. ಈ ಇವೆಂಟ್ಗೆ ಬಂದಿದ್ದ ಕಾಕಿನಾಡ ಜಿಲ್ಲೆಯ ಮಣಿಕಂಠ (23) ಮತ್ತು ಚರಣ್ (22) ಕಾರ್ಯಕ್ರಮ ಮುಗಿಸಿ ವಾಪಸ್ ಆಗುವ ವೇಳೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ವಿಚಾರ ತಿಳಿದ ತಕ್ಷಣ ನಿರ್ಮಾಪಕ ದಿಲ್ ರಾಜು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದು ಪರಿಹಾರ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ದಿಲ್ ರಾಜು, ‘ಗೇಮ್ ಚೇಂಜರ್ ಪ್ರೀ ರಿಲೀಸ್ ಈವೆಂಟ್ ತುಂಬಾ ಅದ್ಧೂರಿಯಾಗಿ ನಡೆಯಿತು ಎಂದು ಸಂತಸ ಪಡುತ್ತಿರುವ ಹೊತ್ತಿನಲ್ಲಿ ಇಬ್ಬರು ಅಭಿಮಾನಿಗಳು ಅಪಘಾತದಲ್ಲಿ ಸಾವನ್ನಪ್ಪಿರುವುದು ತುಂಬಾ ದುಃಖ ತಂದಿದೆ. ಅವರ ಕುಟುಂಬಗಳಿಗೆ ನಾನು ಬೆಂಬಲ ನೀಡುತ್ತೇನೆ. ನನ್ನ ಕಡೆಯಿಂದ ಅವರ ಕುಟುಂಬಗಳಿಗೆ ತಲಾ ರೂ.5 ಲಕ್ಷ ಆರ್ಥಿಕ ನೆರವು ನೀಡುತ್ತಿದ್ದೇನೆ. ಅಂತಹ ಘಟನೆ ನಡೆದಾಗ ಕುಟುಂಬಗಳಲ್ಲಿ ಎಷ್ಟು ನೋವು ಉಂಟಾಗುತ್ತದೆ ಎಂಬುದು ಅರ್ಥವಾಗುತ್ತದೆ. ನಾನು ಅವರಿಗೆ ಸಹಾನುಭೂತಿ ವ್ಯಕ್ತಪಡಿಸುತ್ತೇನೆ’ ಎಂದಿದ್ದಾರೆ.
‘ಗೇಮ್ ಚೇಂಜರ್’ ಚಿತ್ರದ ನಿರ್ಮಾಪಕ ದಿಲ್ ರಾಜು ಅವರಿಗೂ ಮೃತಪಟ್ಟವರಿಗೂ ಯಾವುದೇ ಸಂಬಂಧ ಇಲ್ಲ. ಅಭಿಮಾನಿಗಳು ಮೃತಪಟ್ಟಿದ್ದು ಈವೆಂಟ್ ನಡೆಯುವ ಜಾಗದಲ್ಲೂ ಅಲ್ಲ. ಕಾರ್ಯಕ್ರಮ ಮುಗಿಸಿಕೊಂಡು ಹೋಗುವಾಗ ದುರ್ಘಟನೆ ನಡೆದಿದೆ. ಆದರೆ ಮುಂದಾಗಬಹುದಾದ ತೊಂದರೆಗಳನ್ನು ಮೊದಲೇ ಊಹಿಸಿದ ನಿರ್ಮಾಪಕ ದಿಲ್ ರಾಜು ಪರಿಹಾರ ಘೋಷಿಸಿದ್ದಾರೆ.
ರಾಜಮಹೇಂದ್ರವರಂನಲ್ಲಿ ನಡೆದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ ದಿಲ್ ರಾಜು. ಕಾರ್ಯಕ್ರಮಕ್ಕೆ ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.