ತಮಿಳು ಚಿತ್ರರಂಗದ ಖ್ಯಾತ ನಟ ಸೂರ್ಯ ಮೇಲೆ ಸ್ಟಾರ್ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಅಸಮಾಧಾನ ಹೊರಹಾಕಿದ್ದಾರೆ. ಸೂರ್ಯ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ಆಗಿರುವ ‘ವಾರನಮ್ ಅಯುರುಮ್’ (ಸೂರ್ಯ ಸನ್ ಆಫ್ ಕೃಷ್ಣಮೂರ್ತಿ), ‘ಕಾಕ ಕಾಕ’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿರುವ ಗೌತಮ್ ವಾಸುದೇವ್ ಮೆನನ್, ಸೂರ್ಯ ಮಾತ್ರವಲ್ಲದೆ ತಮಿಳು ಚಿತ್ರರಂಗದ ಹಲವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಅಗತ್ಯ ಇದ್ದಾಗ ಯಾರೂ ನೆರವಾಗುತ್ತಿಲ್ಲ ಎಂದಿದ್ದಾರೆ.
ಗೌತಮ್ ವಾಸುದೇವ್ ಮೆನನ್ ‘ಧ್ರುವ ನಚ್ಚಿತರಮ್’ ಹೆಸರಿನ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಚಿಯಾನ್ ವಿಕ್ರಮ್ ನಾಯಕನಾಗಿ ನಟಿಸಿದ್ದಾರೆ. ಆದರೆ ಹಣಕಾಸಿನ ಸಮಸ್ಯೆ ಹಾಗೂ ಚಿತ್ರರಂಗದವರ ಅಸಹಕಾರ ಸೇರಿದಂತೆ ಇನ್ನಿತರೆ ಕಾರಣಗಳಿಂದ ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಒಂದು ಸಮಯದಲ್ಲಿ ಒಂದರ ಮೇಲೊಂದು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ ಗೌತಮ್ ವಾಸುದೇವ್ ಮೆನನ್ ಈಗ ಒಬ್ಬಂಟಿಯಾಗಿದ್ದಾರೆ. ಹಾಗಾಗಿ ಅವರು ತಮಿಳು ಚಿತ್ರರಂಗದ ದಿಗ್ಗಜರು ಹಾಗೂ ತಮ್ಮ ಮಾಜಿ ಗೆಳೆಯರ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ವಾಸುದೇವ್ ಮೆನನ್, ‘ಸೂರ್ಯ ‘ಧ್ರುವ ನಚ್ಚಿತ್ತರಮ್’ ಸಿನಿಮಾ ಮಾಡುವುದೋ ಬೇಡವೋ ಎಂದು ಯೋಚನೆ ಸಹ ಮಾಡಬಾರದಿತ್ತು, ಒಮ್ಮೆಲೆ ಒಪ್ಪಿಗೆ ನೀಡಬೇಕಿತ್ತು. ಸಿನಿಮಾದಲ್ಲಿ ನಟಿಸಬೇಕೋ ಬೇಡವೋ ಎಂಬ ಪ್ರಶ್ನೆಯೂ ಆತನಲ್ಲಿ ಮೂಡಬಾರದಿತ್ತು’ ಎಂದಿದ್ದಾರೆ. ಗೌತಮ್ ವಾಸುದೇವ್ ಮೆನನ್, ಸೂರ್ಯ ವೃತ್ತಿ ಜೀವನದ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳಾದ ವಾರನಮ್ ಅಯುರುಮ್’ (ಸೂರ್ಯ ಸನ್ ಆಫ್ ಕೃಷ್ಣಮೂರ್ತಿ), ‘ಕಾಕ ಕಾಕ’ ಸಿನಿಮಾಗಳನ್ನು ನಿರ್ದೇಶನ ಮಾಡಿದವರು. ಎರಡು ಹಿಟ್ ಕೊಟ್ಟ ನಿರ್ದೇಶಕ ಕೇಳಿದಾಗ ಇಲ್ಲ ಎನ್ನಬಾರದಿತ್ತು ಎಂದು ಸೂರ್ಯ ವಿರುದ್ಧ ವಾಸುದೇವ್ ಮೆನನ್ ಅಸಮಾಧಾನ ಹೊರ ಹಾಕಿದ್ದಾರೆ.
‘ಧೃವ ನಚ್ಚಿತರಮ್’ ಸಿನಿಮಾದಲ್ಲಿ ಸೂರ್ಯ ನಟಿಸಿದ್ದರೆ ಸಿನಿಮಾ ಬೇರೆಯದ್ದೇ ರೀತಿ ಇರುತ್ತಿತ್ತು. ತನಗಾಗಿ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕನ ಬಗ್ಗೆ ಸೂರ್ಯ ಅನುಮಾನ ಪಡಬಾರದಿತ್ತು. ಸಿನಿಮಾದಲ್ಲಿ ನಟಿಸುವ ಮೂಲಕ ನನ್ನ ಮೇಲೆ ಕರುಣೆ ತೋರಿಸು ಎಂದು ನಾನು ಕೇಳಿರಲಿಲ್ಲ ಬದಲಿಗೆ ಸಿನಿಮಾದಲ್ಲಿ ನಟಿಸು ಎಂದಷ್ಟೆ ನಾನು ಕೇಳಿದ್ದೆ. ನಟಿಸಿದ್ದರೆ ಆತ ಕಳೆದುಕೊಳ್ಳುವುದು ಏನೂ ಇರಲಿಲ್ಲ, ಏಕೆಂದರೆ ಸಿನಿಮಾದ ನಿರ್ಮಾಪಕ ನಾನು ಅವನಲ್ಲ’ ಎಂದಿದ್ದಾರೆ ಗೌತಮ್ ವಾಸುದೇವ್ ಮೆನನ್.
‘ಧ್ರುವ ನಚ್ಚಿತರಮ್’ ಸಿನಿಮಾದ ಬಿಡುಗಡೆಗೆ ನಾನು ಕಷ್ಟಪಡುತ್ತಿದ್ದೇನೆ. ಸಿನಿಮಾ ಬಿಡುಗಡೆ ಮಾಡುವುದು ಬಹಳ ಕಠಿಣವಾಗುತ್ತಿದೆ. ನನಗೆ ಈಗ ಚಿತ್ರರಂಗದವರ ಸಹಾಯ, ನೆರವು, ಮಾರ್ಗದರ್ಶನ ಬೇಕಿದೆ ಆದರೆ ಯಾರೂ ಸಹ ಮುಂದೆ ಬರುತ್ತಿಲ್ಲ. ಆದರೆ ಸಿನಿಮಾದ ಬಗ್ಗೆ ಪ್ರೇಕ್ಷಕರು ಕಾತರರಾಗಿದ್ದಾರೆ. ಹಾಗಾಗಿ ಕಷ್ಟವಾದರೂ ನಾನೇ ಎಲ್ಲವನ್ನೂ ನೋಡಿಕೊಂಡು ಸಿನಿಮಾ ಬಿಡುಗಡೆ ಮಾಡುವೆ’ ಎಂದು ಸಂದರ್ಶನದಲ್ಲಿ ವಾಸುದೇವ್ ಮೆನನ್ ಹೇಳಿದ್ದಾರೆ.