ಬೆಂಗಳೂರು: ಸೋಮವಾರ ರಾತ್ರಿ 11.30ರ ಸುಮಾರಿಗೆ ರಾಜಭವನಕ್ಕೆ ಬಾಂಬ್ ಬೆದರಿಕೆ ಕರೆಯೂ ಬಂದಿದ್ದು, ಪೊಲೀಸರು ತಕ್ಷಣ ರಾಜಭವನದಲ್ಲಿ ಪರಿಶೀಲನೆ ನಡೆಸಿದ್ದಾರೆ, ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಗೊತ್ತಾಗಿದೆ. ಬಾಂಬ್ ಬೆದರಿಕೆ ಕರೆಯ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ಬಾಂಬ್ ಬೆದರಿಕೆ ಕರೆಗಳು ಹೆಚ್ಚಾಗುತ್ತಿವೆ. ಸರಿಯಾಗಿ 12 ದಿವಸದ ಹಿಂದೆ ಡಿಸೆಂಬರ್ 1 ರಂದು ಬೆಂಗಳೂರಿನ 60ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿತ್ತು. ಇದು ಶಾಲಾ ಆಡಳಿತ ಮಂಡಳಿಗೆ ಶಾಕ್ ನೀಡಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ತಂಡ ಎಲ್ಲ ಶಾಲೆಗಳನ್ನು ಪರಿಶೀಲಿಸಿದ್ದರು. ಆಗ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ತಿಳಿಯಿತು.
ಇನ್ನು ವಿಷಯ ಗೊತ್ತಾಗುತ್ತಿದ್ದಂತೆ ಶಾಲೆಗಳಿಗೆ ತೆರಳಿದ ಪೋಷಕರು ಮಕ್ಕಳನ್ನು ಮನೆಗಳಿಗೆ ಕರೆದುಕೊಂಡು ಬಂದಿದ್ದರು. ಅಂದು ಒಂದು ದಿನ ಶಾಲೆಗಳಿಗೆ ರಜೆ ನೀಡಲಾಗಿತ್ತು.