ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ 30 ವರ್ಷಗಳ ಬಳಿಕ ನೆರವೇರುತ್ತಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಲಿದ್ದು ಗಣ್ಯರು, ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರ ಸುರಕ್ಷತೆ ಕಾಪಾಡುವ ಹೊಣೆ ಪೊಲೀಸರ ಮೇಲಿದ್ದು, ಯಾವುದೇ ಅನಾಹುತಕ್ಕೆ ಎಡೆಮಾಡಿಕೊಡದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಚಲುವರಾಯಸ್ವಾಮಿ ಅವರು ಹೇಳಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೊಲೀಸ್ ಬಂದೋಬಸ್ತ್ ಸಭೆಯಲ್ಲಿ ಮಾತನಾಡಿದ ಸಚಿವರು, ಸಮ್ಮೇಳನಕ್ಕೆ ಆಗಮಿಸುವವರಿಗೆ ಸಂಚಾರ ಮಾರ್ಗದ ಫಲಕಗಳು ಹಾಗೂ ಆಗಮನ, ನಿರ್ಗಮನದ ಸ್ಥಳಗಳ ಕುರಿತ ಸೂಚನಾ ಫಲಕಗಳನ್ನು ಹೆದ್ದಾರಿಗಳಲ್ಲಿ ಹಾಕಬೇಕು. ಜನದಟ್ಟಣೆ ಹೆಚ್ಚಾಗಿರುವುದರಿಂದ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳಬೇಕು. ವ್ಯಾಪಕವಾಗಿ ಪೊಲೀಸ್ ಬಂದೋಬಸ್ತ್ ಆಗಬೇಕು ಎಂದರು.
ಸಮ್ಮೇಳನದ ಸಂಬಂಧ ಪೊಲೀಸ್ ಬಂದೋಬಸ್ತ್ ಗೆ ನಿಯೋಜನೆಗೊಳ್ಳಲಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಊಟ, ತಿಂಡಿ, ವಸತಿ ಸೌಕರ್ಯ ಕಲ್ಪಿಸಬೇಕು. ಗಣ್ಯರ ಭದ್ರತೆಯಲ್ಲಿ ಲೋಪವಾಗದಂತೆ ನಿಗಾ ವಹಿಸಬೇಕು. ಅಡುಗೆ ಮಾಡುವ ಸ್ಥಳ, ಪಾರ್ಕಿಂಗ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬೆಂಕಿ ಅವಘಢ ಸಂಭವಸಿದರೆ ಅದನ್ನು ನಂದಿಸಲು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಬೇಕು ಎಂದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು, ಸಮ್ಮೇಳನ ಸಂಬಂಧ ಮಂಡ್ಯದಲ್ಲಿ ಕೈಗೊಂಡಿರುವ ಪೊಲೀಸ್ ಬಂದೋಬಸ್ತ್ ಕುರಿತು ಸಚಿವರಿಗೆ ವಿವರವಾಗಿ ಮಾಹಿತಿ ನೀಡಿದರು.
ಸಮ್ಮೇಳನಾಧ್ಯಕ್ದರ ಮೆರವಣಿಗೆ ಸಾಗುವ ಮಾರ್ಗದಲ್ಲಿ ಸೂಕ್ತ ಬಂದೋಬಸ್ತ್ ಮಾಡಲಾಗುತ್ತದೆ. ಸಮ್ಮೇಳನಕ್ಕೆ ಬೆಂಗಳೂರು, ಮೈಸೂರು ಕಡೆಯಿಂದ ಆಗಮಿಸುವವರಿಗೆ, ನಿರ್ಗಮಿಸುವವರಿಗೆ ಮಾರ್ಗದ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತದೆ. ಸಂಚಾರ ದಟ್ಟಣೆ ಆಗದಂತೆ ಕ್ರಮವಹಿಸಲಾಗುವುದು. 67 ಎಕರೆಗೂ ಅಧಿಕ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಎಲ್ಲಾ ಕಡೆ ಪೊಲೀಸರನ್ನು ನಿಯೋಜಿಸಲಾಗುವುದು ಎಂದರು.
6 ಎಎಸ್ ಪಿ, 21 ಡಿವೈಎಸ್ ಪಿ, 63 ಸಿಪಿಐ, 170 ಪಿಎಸ್ ಐ, 262 ಎಎಸ್ ಐ, 1500 ಪೇದೆಗಳು, 1000 ಹೋಂ ಗಾರ್ಡ್, 165 ಮಹಿಳಾ ಕಾನ್ ಸ್ಟೇಬಲ್ ಒಳಗೊಂಡಂತೆ 14 ಜಿಲ್ಲೆಗಳಿಂದ 3200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಆಗಮಿಸಲಿದ್ದಾರೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಪಾಳಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
EPF Death Claim: ಆಧಾರ್ ದೃಢೀಕರಣ ಇಲ್ಲದೇ ಇದ್ದರೂ EPF ಡೆತ್ ಕ್ಲೈಮ್ ಸಾಧ್ಯವೆ..? ಇಲ್ಲಿದೆ ಮಾಹಿತಿ
ಸಂಚಾರ ನಿರ್ವಹಣೆ, ಪಾರ್ಕಿಂಗ್, ಊಟದ ಕೌಂಟರ್, ವೇದಿಕೆ ಹೀಗೆ ಎಲ್ಲಾ ಕಡೆ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು ಹಗಲು ಮತ್ತು ರಾತ್ರಿ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿ ನಿರತರಾಗಿರಲಿದ್ದಾರೆ. ಸಿಸಿಟಿವಿ ನಿಗಾ ವ್ಯವಸ್ಥೆ ಮಾಡಲಾಗಿದೆ. ಅಪರಾಧ ಹಾಗೂ ಕಳ್ಳತನ ತಡೆಯಲು ಅಪರಾಧಿ ಪತ್ತೆ ದಳ ಹಾಗೂ ಮಫ್ತಿಯಲ್ಲಿ ಪೊಲೀಸರು ಗಸ್ತು ತಿರುಗಲಿದ್ದಾರೆ ಎಂದರು.
ಪೊಲೀಸರು ತಂಗಲು ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ವಾಹನಗಳಿಗೆ ಪಾರ್ಕಿಂಗ್ ಪಾಸ್ ಹಾಗೂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪಾಸ್ ವ್ಯವಸ್ಥೆ ಮಾಡಲಾಗಿದೆ. ಹೆದ್ದಾರಿ ಹಾಗೂ ನಗರದಲ್ಲಿ ಟೋಯಿಂಗ್ ವಾಹನಗಳ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. 10ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗುತ್ತಿದೆ. ಪೊಲೀಸ್ ಔಟ್ ಪೋಸ್ಟ್, ಮಹಿಳಾ ಸಹಾಯವಾಣಿ ಕೇಂದ್ರಗಳನ್ನು ಸಹ ತೆರೆಯಲಾಗುತ್ತಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ. ಕುಮಾರ ಅವರು ಮಾತನಾಡಿ, ಪ್ರತಿ ಅರ್ಧ ಗಂಟೆಗೆ ಒಂದರಂತೆ ವಿಶೇಷ “ಸಾಹಿತ್ಯ ಸಾರಿಗೆ ಬಸ್” ಗಳು ಸಂಚರಿಸಲಿವೆ. ಪ್ರತಿ ತಾಲೂಕಿಗೆ 15 ಬಸ್ ಗಳಂತೆ 105 ಬಸ್ ಗಳು ಸಂಚರಿಸಲಿವೆ. ನಗರದಿಂದ 15 ಬಸ್ ಗಳು ಉಚಿತವಾಗಿ ಸಂಚರಿಸಲಿವೆ. ನೋಂದಣಿ ಕೇಂದ್ರದ ಸಮೀಪ ಆರೋಗ್ಯ ಕೇಂದ್ರ ತೆರೆಯಲಾಗುತ್ತಿದ್ದು ದಿನದ 24 ಗಂಟೆ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು.
ಸಭೆಯಲ್ಲಿ ಶಾಸಕರುಗಳಾದ ರವಿಕುಮಾರ್ ಗಣಿಗ, ರಮೇಶ್ ಬಾಬು ಬಂಡಿಸಿದ್ದೇಗೌಡ, ದಿನೇಶ್ ಗೂಳಿಗೌಡ, ಡಿಐಜಿಪಿ ಡಾ. ಬೋರಲಿಂಗಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.