ಸೂಕ್ಷ್ಮ ಮಾಹಿತಿಗಳನ್ನು ಹೊಂದಿರುವ ರಶ್ಯದ ಬೃಹತ್ ಜೈಲು ಡೇಟಾಬೇಸ್ ಗೆ ಹ್ಯಾಕರ್ ಗಳು ಕನ್ನ ಹಾಕಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
ಇತ್ತೀಚೆಗೆ ಜೈಲಿನಲ್ಲಿ ಮೃತಪಟ್ಟ ರಶ್ಯದ ವಿರೋಧ ಪಕ್ಷದ ಮುಖಂಡ ಅಲೆಕ್ಸಿ ನವಾಲ್ನಿಯ ಸಾವಿಗೆ ಸೇಡು ತೀರಿಸಿಕೊಳ್ಳಲು ಸರಕಾರಿ ವಿರೋಧಿ ಸೈಬರ್ಕ್ರಿ ಮಿನಲ್ಗಳು ನಡೆಸಿರುವ ಕೃತ್ಯ ಇದಾಗಿದೆ ಎಂದು ಶಂಕಿಸಲಾಗಿದೆ.
ರಶ್ಯದ ಜೈಲುವ್ಯವಸ್ಥೆಯೊಂದಿಗೆ ಸಂಪರ್ಕದಲ್ಲಿರುವ ಕಂಪ್ಯೂಟರ್ ನೆಟ್ವರ್ಕ್ ಬಳಸಿ ಹ್ಯಾಕ್ ಮಾಡಲಾದ ಜೈಲು ಗುತ್ತಿಗೆದಾರರ ವೆಬ್ಸೈಟ್ನಲ್ಲಿ ನವಾಲ್ನಿಯ ಫೋಟೊ ಹಾಕಲಾಗಿದೆ. ಫೋಟೋದ ಕೆಳಗೆ `ಅಲೆಕ್ಸಿ ನವಾಲ್ನಿ ಚಿರಾಯುವಾಗಲಿ’ ಎಂದು ಬರೆದಿದ್ದು ಇದರ ಜೊತೆಗೆ ನವಾಲ್ನಿ ತನ್ನ ಪತ್ನಿ ಯೂಲಿಯಾ ಜತೆ ಭಾಗವಹಿಸಿದ್ದ ರಾಜಕೀಯ ರ್ಯಾಲಿಯ ಫೋಟೊವನ್ನು ಬಳಸಲಾಗಿದೆ.
ವೆಬ್ಸೈಟ್ಗೆ ಕನ್ನ ಹಾಕಿದ್ದು ಮಾತ್ರವಲ್ಲ, 8 ಲಕ್ಷಕ್ಕೂ ಅಧಿಕ ರಶ್ಯನ್ ಕೈದಿಗಳ ಮಾಹಿತಿಯನ್ನು ಒಳಗೊಂಡ ಡೇಟಾಬೇಸ್ ಕೂಡಾ ಹ್ಯಾಕರ್ ಗಳ ವಶವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಶ್ಯನ್ ಜೈಲುಗಳ ಆನ್ಲೈನ್ ಅಂಗಡಿಗಳಲ್ಲಿ ಮಾರುವ ವಸ್ತುಗಳ ಬೆಲೆಯನ್ನೂ ಹ್ಯಾಕರ್ ಗಳು ಮಾರ್ಪಡಿಸಿದ್ದು ಅತೀ ಕಡಿಮೆ ಬೆಲೆ ನಮೂದಿಸಿರುವುದರಿಂದ ಆನ್ಲೈನ್ ಖರೀದಿ ಭರದಿಂದ ಸಾಗಿದೆ. ಸಿಬಂದಿಗಳಿಗೆ ಈ ಮಾಹಿತಿ ತಿಳಿಯುವಾಗ ತುಂಬಾ ತಡವಾಗಿದ್ದು ಭಾರೀ ನಷ್ಟ ಸಂಭವಿಸಿದೆ. ಸೈಬರ್ ಭದ್ರತಾ ತಜ್ಞರು ಸೋರಿಕೆಯಾದ ಡೇಟಾದ ಸತ್ಯಾಸತ್ಯತೆಯನ್ನು ದೃಢಪಡಿಸಿದ್ದಾರೆ. ನವಾಲ್ನಿಯ ಸಾವಿಗೆ ರಶ್ಯ ಸರಕಾರ ಕಾರಣ ಎಂದು ಅವರ ಬೆಂಬಲಿಗರು, ಸಂಬಂಧಿಕರು ಹಾಗೂ ಪಾಶ್ಚಿಮಾತ್ಯ ಮುಖಂಡರು ಆರೋಪಿಸಿದ್ದಾರೆ.