ರಾಜಸ್ಥಾನ್ ವಿರುದ್ಧ ಡೆಲ್ಲಿಗೆ 20 ರನ್ ಗಳ ರೋಚಕ ಗೆಲುವು ಸಿಕ್ಕಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಲ್ಲಿ ಆರನೇ ಗೆಲುವು ದಕ್ಕಿಸಿಕೊಂಡಿತು.
ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 222 ರನ್ಗಳ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್ ತಂಡ, ತನ್ನ ಪಾಲಿನ 20 ಓವರ್ಗಳನ್ನು ಪೂರ್ಣಗೊಳಿಸಿದರೂ 8 ವಿಕೆಟ್ ನಷ್ಟಕ್ಕೆ 201 ರನ್ಗಳಿಗೆ ಸೀಮಿತವಾಯಿತು. ಆ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಮೂರನೇ ಸೋಲು ಅನುಭವಿಸಿತು.
ನಿಮ್ಮ ದೇಹದ ಕೊಬ್ಬಿನಾಂಶ ಕರಗಿಸಬೇಕೆ!?.. ಹಾಗಿದ್ರೆ ಈ ಎಂಟು ತರಕಾರಿಗಳನ್ನು ಸೇವಿಸಿ..!
ರಾಜಸ್ಥಾನ್ ರಾಯಲ್ಸ್ ಪರ ಇನಿಂಗ್ಸ್ ಆರಂಭಿಸಿದ ಜೋಸ್ ಬಟ್ಲರ್ (19) ಹಾಗೂ ಯಶಸ್ವಿ ಜೈಸ್ವಾಲ್ (4) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದಿದ್ದ ಸಂಜು ಸ್ಯಾಮ್ಸನ್ 16ನೇ ಓವರ್ವರೆಗೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದರು. ಆ ಮೂಲಕ ಕೇವಲ 46 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 86 ರನ್ ಸಿಡಿಸಿದರು. ಆದರೆ,ಇನ್ನೇನು ತಂಡವನ್ನು ಗೆಲ್ಲಿಸುವ ಹಾದಿಯಲ್ಲಿದ್ದ ಅವರನ್ನು ಮುಖೇಶ್ ಕುಮಾರ್ ಔಟ್ ಮಾಡಿದರು.
ಸಂಜು ಸ್ಯಾಮ್ಸನ್ಗೆ ರಿಯಾನ್ ಪರಾಗ್ (27) ಹಾಗೂ ಶುಭಮನ್ ದುಬೇ (25) ಅವರು ಕೆಲ ಕಾಲ ಸಾಥ್ ನೀಡಿದ್ದರು. ಆದರೆ, ರೊವ್ಮನ್ ಪೊವೆಲ್ ಹಾಗೂ ಡೊನೊವನ್ ಪೆರೇರಿ ಅವರು ವೈಫಲ್ಯ ಅನುಭವಿಸಿದರು. ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ತಂಡ ಸೋಲು ಅನುಭವಿಸಿತು. ಡೆಲ್ಲಿ ಪರ 4 ಓವರ್ಗಳಿಗೆ ಕೇವಲ 25 ರನ್ ನೀಡಿ 2 ವಿಕೆಟ್ ಕಿತ್ತ ಕುಲ್ದೀಪ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಪಾಲಿನ 20 ಓವರ್ಗಳಿಗೆ 8 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತ್ತು ಹಾಗೂ ರಾಜಸ್ಥಾನ್ ರಾಯಲ್ಸ್ಗೆ 222 ರನ್ ಗುರಿ ನೀಡಿತ್ತು. ಡೆಲ್ಲಿ ಪರ ಜೇಕ್ ಮೆಗರ್ಕ್ 50 ರನ್, ಅಭಿಷೇಕ್ ಪೊರೆಲ್ 65 ರನ್ ಹಾಗೂ ಟ್ರಿಸ್ಟನ್ ಸ್ಟಬ್ಸ್ 41 ರನ್ ಗಳಿಸಿದರು.