ಬೆಂಗಳೂರು: ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರ ಭಾವ ಮಹದೇವಯ್ಯ ಕಾಣೆಯಾಗಿದ್ದು, ಎರಡ್ಮೂರು ದಿನ ಕಳೆದರೂ ಸಹ ಅವರ ಪತ್ತೆಯೇ ಇಲ್ಲ.ಆದರೆ ಇದೀಗ ಅವರ ಕಾರು ಚಾಮರಾಜನಗರ ಜಿಲ್ಲೆಯ ರಾಮಾಪುರ ಗ್ರಾಮ ಬಳಿ ಪತ್ತೆಯಾಗಿದೆ.
ಹೌದು, ಎರಡ್ಮೂರು ದಿನದಿಂದ ಕಾಣದ ಕಾರು ಇದೀಗ ಪತ್ತೆಯಾಗಿದ್ದು,ಕಾರಿನ ಟೈ ಲ್ಯಾಂಪ್ ಬಳಿ ರಕ್ತದ ಕಲೆ ಇದ್ದು, ಸ್ಥಳಕ್ಕೆ ರಾಮನಗರ ಪೊಲೀಸ್ ತನಿಖಾ ತಂಡ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆಯ ವಿವರ: ಮೂರು ದಿನಗಳ ಹಿಂದೆ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದಿಂದ ನಾಪತ್ತೆಯಾಗಿರುವ,ಮೆಗಾಸಿಟಿ ಯೋಜನೆಯ ನಿರ್ದೇಶಕ ಮಹಾದೇವಯ್ಯ (62) ಅವರಿಗೆ ಸಂಬಂಧಿಸಿ ಹಲವು ಅನುಮಾನಾಸ್ಪದ ಸುದ್ದಿಗಳು ಹರಿದಾಡುತ್ತಿವೆ.
ಸಿ.ಪಿ. ಯೋಗೇಶ್ವರ್ ಅವರ ಬಾವನ ನಾಪತ್ತೆ ಪ್ರಕರಣವನ್ನು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಅವರು ಗಂಭೀರವಾಗಿ ತೆಗೆದುಕೊಂಡು ತನಿಖೆಗಾಗಿ ನಾಲ್ಕು ವಿಶೇಷ ತಂಡವನ್ನು ರಚಿಸಿದ್ದರು. ಮಹದೇವಯ್ಯ ಪುತ್ರ ಪ್ರಶಾಂತ್ ದೂರಿನ ಅನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಅವರ ಮೊಬೈಲ್ ಲೊಕೇಶನ್ ಸಿಕ್ಕರೆ ಪತ್ತೆ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಪ್ರಯತ್ನ ನಡೆಸಲಾಗಿತ್ತು. ಮೊಬೈಲ್ ಗೆ ನಿರಂತರ ಕರೆ ಮಾಡಿದಾಗ ಒಮ್ಮೆ ಯಾರೋ ಒಬ್ಬರು ಸ್ವೀಕರಿಸಿದ್ದರು. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ತೋಟದ ಮನೆಯ ಸಿಸಿ ಟಿವಿ ಕೆಟ್ಟಿದ್ದರಿಂದ ಯಾರು ಬಂದರು, ಯಾರು ಅಪಹರಿಸಿದರು ಎನ್ನುವ ಮಾಹಿತಿಗಳು ಲಭ್ಯವಾಗಿಲ್ಲ. ಅಕ್ಕಪಕ್ಕದ ಮನೆಗಳ ಸಿಸಿ ಟಿವಿ ಫೂಟೇಜ್ ಗಳನ್ನು ಪರಿಶೀಲನೆ ನಡೆಸಲಾಗಿದ್ದರೂ ಹೆಚ್ಚಿನ ಕ್ಲೂಗಳು ಸಿಕ್ಕಿಲ್ಲ.