ಬೆಂಗಳೂರು:- ಸಾಕಷ್ಟು ಕುತೂಹಲ ಕೆರಳಿಸಿದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದಿವೆ. ಗೆಲುವು ಖಚಿತವಾಗುವ ಮುನ್ನವೇ MLA ನಿಖಿಲ್ ಎನ್ನುವ ಫಲಕ ಸಿದ್ಧವಾಗಿರುವುದು ಗಮನ ಸೆಳೆದಿದೆ.
ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆ ಫಲಿತಾಂಶ! 3 ಕ್ಷೇತ್ರದಲ್ಲಿ ವಿಜಯಪತಾಕೆ ಯಾರಿಗೆ!?
ಈ ಬಾರಿ ನಿಖಿಲ್ ಕುಮಾರಸ್ವಾಮಿ ಅವರೇ ಬಹುತೇಕ ಗೆಲ್ಲುವ ಸಾಧ್ಯತೆಗಳಿವೆ ಎಂದು ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಸೆಲೆಬ್ರೇಷನ್ಗೆ ಮುಂದಾಗಿದ್ದಾರೆ.
ರಾಜ್ಯದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಇಂದು ತೆರೆಗೆ ಬೀಳಲಿದ್ದು, ಅದರಲ್ಲೂ ಎಲ್ಲರ ಚಿತ್ತ ಚನ್ನಪಟ್ಟಣದ ಬಳಿ ಮುಖ ಮಾಡಿದೆ.
ಹಿರಿಯ ರಾಜಕಾರಣಿಯು ಆಗಿರುವ ಸಿ.ಪಿಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರವನ್ನು 5 ಬಾರಿ ಪ್ರತಿನಿಧಿಸಿದ್ದಾರೆ. ಇದೀಗ 6ನೇ ಬಾರಿ ಜಯದ ನಿರೀಕ್ಷೆಯಲ್ಲಿದ್ದಾರೆ. ಹಿರಿಯ ರಾಜಕಾರಣಿಗೆ ಎದುರಾಳಿಯಾಗಿ ಯುವ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ. ಕೇಂದ್ರ ಸಚಿವ ಕುಮಾರಸ್ವಾಮಿ ಪುತ್ರ ನಿಖಿಲ್ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ. ಅನುಭವಿ ಹಾಗೂ ಯುವ ರಾಜಕಾರಣಿ ಮಧ್ಯದ ಹೋರಾಟದ ಬಗ್ಗೆ ಜನರಲ್ಲಿ ಕುತೂಹಲವಿದೆ. ಯೋಗೇಶ್ವರ್ ಈ ಬಾರಿ ಗೆದ್ದರೆ 6 ಬಾರಿ ಕ್ಷೇತ್ರ ಪ್ರತಿನಿಧಿಸಿದ ಮೊದಲ ಶಾಸಕರಾಗುತ್ತಾರೆ. ನಿಖಿಲ್ ಜಯ ಗಳಿಸಿದರೆ ಕ್ಷೇತ್ರದಲ್ಲಿ ಮೊದಲ ಬಾರಿ ಯುವ ರಾಜಕಾರಣಿ ಶಾಸಕರಾದಂತೆ ಆಗುತ್ತದೆ. ಹೀಗಾಗಿ ಚುನಾವಣೆಯ ಫಲಿತಾಂಶ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲಿದೆ.
ಚುನಾವಣೆ ಕ್ಷೇತ್ರದಲ್ಲಿ ಆಡಳಿತ, ವಿಪಕ್ಷದ ಭರಾಟೆಯ ಪ್ರಚಾರಕ್ಕೆ ಸಾಕ್ಷಿಯಾಯಿತು. ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ರಾಜಕೀಯ ಕ್ಷೇತ್ರದ ದಿಗ್ಗಜರು ಕ್ಷೇತ್ರದಲ್ಲಿ ಸಂಚಾರ ನಡೆಸಿ ಪ್ರಚಾರ ಕೈಗೊಂಡರು. ಜಾತಿ ಲೆಕ್ಕಾಚಾರ, ಪಕ್ಷಗಳ ಬಲಾಬಲ, ಒಳ ಜಗಳಗಳು ಸದ್ದು ಮಾಡಿವೆ.
ಮಾಜಿ ಪ್ರಧಾನಿ ದೇವೇಗೌಡರ ನೀರಾವರಿ ಕೊಡುಗೆ, ಕೇಂದ್ರ ಸಚಿವ ಕುಮಾರಸ್ವಾಮಿರವರ ಸಾಧನೆ ಮುಂದಿಟ್ಟು ಜೆಡಿಎಸ್ ಮತಯಾಚಿಸಿತು. ಮೈತ್ರಿ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಜೆಡಿಎಸ್ ಪರ ಪ್ರಚಾರ ನಡೆಸಿದರು. ಇನ್ನು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಕೇಂದ್ರ ಸರ್ಕಾರದ ವೈಫಲ್ಯ ಪಟ್ಟಿ ಮಾಡಿದ ಕಾಂಗ್ರೆಸ್ನಿಂದ ಮತ ಗಿಟ್ಟಿಸುವ ತಂತ್ರಗಾರಿಕೆ ನಡೆಯಿತು. ಅಭ್ಯರ್ಥಿ ಯೋಗೇಶ್ವರ್ ವೈಯಕ್ತಿಕ ವರ್ಚಸ್ಸು, ಸಿಂಪತಿಯೂ ಕೆಲಸ ಮಾಡಿರುವ ಸಾಧ್ಯತೆಗಳಿವೆ. ಎರಡೂ ಪಕ್ಷಗಳು ಸಮಬಲವಾಗಿ ಪ್ರಚಾರ ನಡೆಸಿ ಮತದಾರರ ಮನಸ್ಸು ಅರಿಯುವ ಯತ್ನ ನಡೆಸಿವೆ. ಹೀಗಾಗಿ ಫಲಿತಾಂಶದ ಬಗ್ಗೆ ಕ್ಷೇತ್ರದ ಜನರಲ್ಲಿ ಭಾರಿ ಕುತೂಹಲವಿದೆ.
ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಮಧ್ಯದ ಹೋರಾಟ ಪೈಪೋಟಿಯಿಂದ ಇರಲಿದೆ ಎನ್ನಲಾಗುತ್ತಿದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕುಮಾರಸ್ವಾಮಿ ಗೆಲುವು ಪಡೆದಿದ್ದರು. ಆದರೆ, ಜೆಡಿಎಸ್ – ಬಿಜೆಪಿ ಮುಖಂಡರು ಕಳೆದ ಬಾರಿಗಿಂತ ಹೆಚ್ಚಿನ ಲೀಡ್ ಪಡೆಯುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತ ಕಾಂಗ್ರೆಸ್ ಮುಖಂಡರು ಹೆಚ್ಚಿನ ಲೀಡ್ನಿಂದ ಗೆಲುವು ನಮ್ಮದೇ ಎನ್ನುತ್ತಿದ್ದಾರೆ. ಯಾರು ಎಷ್ಟು ಮತ ಪಡೆದರು ಎನ್ನುವುದು ಶನಿವಾರ ಮಧ್ಯಾಹ್ನದ ಹೊತ್ತಿಗೆ ಖಚಿತವಾಗಲಿದೆ.
ರಾಮನಗರ ಜಿಲ್ಲೆಯ ರಾಜಕಾರಣದಲ್ಲಿ ತಮ್ಮದೇ ಹಿಡಿತ ಹೊಂದಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ , ಈ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಪ್ರತಿಷ್ಠೆ ಜೊತೆಗೆ ಪಕ್ಷದ ಅಸ್ತಿತ್ವದ ಪ್ರಶ್ನೆಯಾಗಿದೆ.
ಈ ಹಿಂದೆ ಜಿಲ್ಲೆಯಲ್ಲಿ ಕನಿಷ್ಠ ಇಬ್ಬರು ಜೆಡಿಎಸ್ ಶಾಸಕರು ಆಯ್ಕೆಯಾಗುತ್ತಿದ್ದರು. ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಆ ಸಂಖ್ಯೆ ಒಂದಕ್ಕಿಳಿಯಿತು. ಈಗ ಅದನ್ನು ಉಳಿಸಿಕೊಳ್ಳಲು ಬಿಜೆಪಿ ಸಹಕಾರದೊಂದಿಗೆ ಜೆಡಿಎಸ್ ಹೋರಾಟ ನಡೆಸಿದೆ. ಹೀಗಾಗಿ ಉಪಚುನಾವಣೆ ಫಲಿತಾಂಶ ಜೆಡಿಎಸ್ ಪಾಲಿಗೆ ಮಹತ್ವ ಪಡೆದುಕೊಂಡಿದೆ
ಈ ಉಪಚುನಾವಣೆ ಫಲಿತಾಂಶ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ. ಈಗಾಗಲೇ ಕ್ರಮವಾಗಿ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಕಂಡಿರುವ ಅವರಿಗೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅವಶ್ಯಕವಾಗಿದೆ.
ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದಾಗಲೆಲ್ಲ ಯೋಗೇಶ್ವರ್ ಸೋಲು ಕಂಡಿದ್ದೆ ಹೆಚ್ಚು, ಒಂದು ಬಾರಿ ಉಪಚುನಾವಣೆಯಲ್ಲಿ ಮಾತ್ರ ಗೆಲುವು ಸಾಧಿಸಿದ್ದರು.ಅದೇ ಕಾಂಗ್ರೆಸ್ ನಿಂದ ಕಣಕ್ಕಿಳಿದಾಗ ಮತದಾರರು ಕೈ ಹಿಡಿದಿರುವುದು ಹಿಂದಿನ ಚುನಾವಣೆಗಳ ಫಲಿತಾಂಶದಿಂದ ಸ್ಪಷ್ಟವಾಗಿದೆ