ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಿನಿಮಾದ ಪ್ರದರ್ಶನದ ವೇಳೆ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಘಟನೆ ಸಂಬಂಧ ನಟ ಅಲ್ಲು ಅರ್ಜುನ್ ಸೇರಿದಂತೆ ಇನ್ನೂ ಕೆಲವರ ಮೇಲೆ ಕೇಸ್ ದಾಖಲಿಸಲಾಗಿತ್ತು. ಬಳಿಕ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿ ಮಧ್ಯಂತರ ಜಾಮೀನಿನ ಮೂಲಕ ಬಿಡುಗಡೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಟಾಲಿವುಡ್ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಘಟನೆಯ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.
ಸೆಲೆಬ್ರಿಟಿಗಳು ಹೋದಲ್ಲಿ ಬಂದಲ್ಲಿ ಜನಸಾಗರ ಸೇರುವುದು ಸಹಜ. ಆಗ ಉಂಟಾಗುವ ಅವಘಡಗಳಿಗೆ ಸೆಲೆಬ್ರಿಟಿಗಳನ್ನು ಹೊಣೆ ಮಾಡುವುದು ಸರಿಯಲ್ಲ ಎಂಬುದು ರಾಮ್ ಗೋಪಾಲ್ ವರ್ಮಾ ಅವರ ವಾದ. ಇದಕ್ಕೆ ಪೂರಕವಾಗಿ ಅವರು ಒಂದು ಉದಾಹರಣೆ ನೀಡಿದ್ದಾರೆ. ಶ್ರೀದೇವಿ ನಟನೆಯ ‘ಕ್ಷಣ ಕ್ಷಣಂ’ ಸಿನಿಮಾದ ಶೂಟಿಂಗ್ ವೇಳೆ ನಡೆದ ಘಟನೆಯನ್ನು ಈಗ ರಾಮ್ ಗೋಪಾಲ್ ವರ್ಮಾ ನೆನಪು ಮಾಡಿಕೊಂಡಿದ್ದಾರೆ.
‘ಅಲ್ಲು ಅರ್ಜುನ್ ಬಂಧನದ ವಿರುದ್ಧ ಪ್ರತಿಯೊಬ್ಬ ಸ್ಟಾರ್ ಕೂಡ ಪ್ರತಿಭಟನೆ ಮಾಡಬೇಕು. ಸಿನಿಮಾದವರು ಆಗಿರಬಹುದು ಅಥವಾ ರಾಜಕೀಯದವರು ಆಗಿರಬಹುದು. ತುಂಬ ಜನಪ್ರಿಯತೆ ಹೊಂದುವುದು ಅಪರಾಧವೇ? ನನ್ನ ಕ್ಷಣ ಕ್ಷಣಂ ಸಿನಿಮಾದ ಚಿತ್ರೀಕರಣದ ವೇಳೆ ಶ್ರೀದೇವಿಯನ್ನು ನೋಡಲು ಲಕ್ಷಾಂತರ ಜನರು ಬಂದಿದ್ದರು. 3 ಜನರು ಸಾವಿಗೀಡಾದರು. ಹಾಗಾದ್ರೆ ಈಗ ತೆಲಂಗಾಣ ಪೊಲೀಸರು ಸ್ವರ್ಗಕ್ಕೆ ಹೋಗಿ ಶ್ರೀದೇವಿಯನ್ನು ಬಂಧಿಸುತ್ತಾರಾ’ ಎಂದು ರಾಮ್ ಗೋಪಾಲ್ ವರ್ಮಾ ಪ್ರಶ್ನೆ ಮಾಡಿದ್ದಾರೆ.