ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೊಂದಾಯಿಸಿಯೂ ಹಣ ಸಿಗದೇ ಇದ್ದ ರೈತನ್ನು ತಲುಪಲು ಅಭಿಯಾನ ಆರಂಭಿಸಿದೆ.
ಫಲಾನುಭವಿ ರೈತರಿಗೆ ವರ್ಷಕ್ಕೆ 6,000 ರೂ ಧನಸಹಾಯ ಸಿಗುತ್ತದೆ. 9 ಕೋಟಿಗೂ ಹೆಚ್ಚು ಮಂದಿ ರೈತರು ಈ ಸ್ಕೀಮ್ಗೆ ನೊಂದಾಯಿತರಾಗಿದ್ದು ಪ್ರತೀ ನಾಲ್ಕು ತಿಂಗಳಿಗೆ 2,000 ರೂ ಹಣವನ್ನು ತಮ್ಮ ಅಕೌಂಟ್ಗಳಲ್ಲಿ ಪಡೆಯುತ್ತಾರೆ. 2019ರಲ್ಲಿ ಆರಂಭಗೊಂಡ ಈ ಯೋಜನೆಯಲ್ಲಿ ಈವರೆಗೆ 15 ಕಂತುಗಳ ಹಣವು ರೈತರ ಖಾತೆಗಳಿಗೆ ವರ್ಗಾವಣೆ ಆಗಿದೆ. 16ನೇ ಕಂತಿನ ಹಣ ಈ ತಿಂಗಳು ಅಥವಾ ಮಾರ್ಚ್ ತಿಂಗಳಲ್ಲಿ ಬರುವ ಸಾಧ್ಯತೆ ಇದೆ. ಆದರೆ, ಯೋಜನೆಯಲ್ಲಿ ತಮ್ಮ ಹೆಸರು ನೊಂದಾಯಿಸಲಾಗಿದ್ದರೂ ಖಾತೆಗೆ ಹಣ ಬಂದಿಲ್ಲ ಎಂದು ಹಲವಾರು ರೈತರು ದೂರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ಈ ಸಮಸ್ಯೆಗೆ ಪರಿಹಾರ ಒದಗಿಸಲು ಸರ್ಕಾರ ಅಭಿಯಾನ ಆರಂಭಿಸಿದೆ.
ಹತ್ತು ದಿನಗಳ ಕಾಲ ಕೃಷಿ ಸಚಿವಾಲಯವು ಈ ಅಭಿಯಾನ ಕೈಗೊಂಡಿದೆ. ದೇಶಾದ್ಯಂತ ವಿವಿಧ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತಗಳು ಈ ಕಾರ್ಯದಲ್ಲಿ ಸಹಕಾರ ತೋರಲಿದ್ದು, ನಾಲ್ಕು ಲಕ್ಷ ಸಿಎಸ್ಸಿ ಕೇಂದ್ರಗಳ ಮೂಲಕ ಅರ್ಹ ರೈತರಿಗೆ ಅವರ ಹಣ ಸಿಗದೇ ಹೋಗಲು ಕಾರಣವೇನೆಂದು ಪತ್ತೆ ಹಚ್ಚಿ ಪರಿಹಾರ ಒದಗಿಸುವ ಕಾರ್ಯ ಮಾಡಲಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೊಂದಾವಣಿ ಮಾಡಿದ ಅರ್ಹ ರೈತರ ಖಾತೆಗಳಿಗೆ ಹಣ ವರ್ಗಾವಣೆ ಆಗುತ್ತಿಲ್ಲ ಎಂದರೆ ಅದಕ್ಕೆ ಎರಡು ಸಂಭಾವ್ಯ ಕಾರಣ ಇರಬಹುದು ಎಂದು ಸರ್ಕಾರಿ ಅಧಿಕಾರಿಗಳು ಭಾವಿಸಿದ್ದಾರೆ. ಒಂದನೆಯ ಕಾರಣವೆಂದರೆ ಇ-ಕೆವೈಸಿ ಅಪ್ಡೇಟ್ ಆಗಿಲ್ಲದೇ ಇರಬಹುದು. ಇನ್ನೊಂದು ಸಂಭಾವ್ಯ ಕಾರಣವೆಂದರೆ ಯೋಜನೆಗೆ ನೀಡಲಾದ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗಿಲ್ಲದೇ ಇರಬಹುದು.
ಯಾವ್ಯಾವ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಹಣ ಬಂದಿಲ್ಲ ಎಂಬುದನ್ನು ಮೊದಲು ಗುರುತಿಸಲಾಗುತ್ತದೆ. ವಿವಿಧೆಡೆ ಕಾಮನ್ ಸರ್ವಿಸ್ ಸೆಂಟರ್ ಕ್ಯಾಂಪ್ಗಳನ್ನು ಜಿಲ್ಲಾಡಳಿತ ಸ್ಥಾಪಿಸಲಿದೆ. ಈ ಕ್ಯಾಂಪ್ನಲ್ಲಿರುವ ಎಕ್ಸಿಕ್ಯೂಟಿವ್ಗಳು ಸಂತ್ರಸ್ತರ ರೈತರ ಸಮಸ್ಯೆಯನ್ನು ಗುರುತಿಸಿ ಅದನ್ನು ಸ್ಥಳದಲ್ಲೇ ಸರಿಪಡಿಸಲು ಯತ್ನಿಸಲಿದ್ದಾರೆ. ಪಿಎಂ ಕಿಸಾನ್ ಯೋಜನೆಯ ಹಣ ಬರುತ್ತಿಲ್ಲದವರು ತಮ್ಮ ಸಮೀಪದ ಇಂಥ ಒಂದು ಕ್ಯಾಂಪ್ಗೆ ಭೇಟಿ ನೀಡಿ ತಮ್ಮ ಸಮಸ್ಯೆ ತಿಳಿಸಬಹುದು.
ಫೆಬ್ರುವರಿ 21ರವರೆಗೆ ಕಾಲಾವಕಾಶ ಇದೆ