ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರ ವಿಡಿಯೋ ವೈರಲ್ ವಿಚಾರವಾಗಿ ತೀರ್ಥಹಳ್ಳಿಯಲ್ಲಿ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಏನು ಮಾತನಾಡಿದ್ದಾರೆ ಎನ್ನುವ ಬಗ್ಗೆ ತನಿಖೆ ಆಗಬೇಕು. ಯಾರ ಜೊತೆ ಮಾತನಾಡಿದ್ದಾರೆ. ಯಾರಿಗೆ ನಿರ್ದೇಶನ ಕೊಡ್ತಿದ್ದಾರೆ ಅಂತಾ ತನಿಖೆ ಆಗಬೇಕು. ಸಿದ್ದರಾಮಯ್ಯ ಅವರು ಸಿಎಂ ಇದ್ದಾರೆ. ಅವರಿಗೆ ಹಕ್ಕು ಇದೆ.
ಅವರ ಮಗ ಅದರಲ್ಲಿ ಮೂಗು ತೂರಿಸಿದ್ದಾರೆ ಅಂದರೆ ರಾಜ್ಯದ ಜನರ ಅರಿವಿಗೆ ಬರಬೇಕು. ಈ ಬಗ್ಗೆ ತನಿಖೆ ಆಗಬೇಕು. ಏನಾಗಿದೆ ಅಂತಾ ಸಿದ್ದರಾಮಯ್ಯ ರಾಜ್ಯದ ಜನರಿಗೆ ತಿಳಿಸಬೇಕು. ಸರಕಾರ ಅಧಿಕಾರಕ್ಕೆ ಬಂದು 6 ತಿಂಗಳು ಆದರೂ ಸಿದ್ದರಾಮಯ್ಯ ಅಭಿವೃದ್ಧಿಗೆ 6 ಪೈಸೆ ಕೊಡಲಿಲ್ಲ. ಆರು ತಿಂಗಳಲ್ಲಿ ಇಷ್ಟು ಕೆಟ್ಟ ಹೆಸರು ತೆಗೆದುಕೊಂಡ ಇನ್ನೊಂದು ಸರಕಾರ ಇಲ್ಲ. 136 ಸೀಟ್ ಬಂದಿದೆ ತಾವು ಏನು ಮಾಡಿದರೂ ನಡೆಯುತ್ತದೆ ಅಂತಾ ನಡೆಸಿದರೆ ಖಂಡಿತವಾಗಿ ಆಗುವುದಿಲ್ಲ.
ಬಿಜೆಪಿ ಸರಕಾರ ಇದ್ದಾಗ 40% ಸರಕಾರ ಅಂತಾ ಬೊಬ್ಬೆ ಹೊಡೆದು ಅಧಿಕಾರಕ್ಕೆ ಬಂದರು. ಈಗ ಇವರು ಮಾಡುತ್ತಿರುವುದು ಏನು? ತೀವ್ರವಾದ ಭ್ರಷ್ಟಾಚಾರ ನಡೆಯುತ್ತಿದೆ. ಎಲ್ಲದರಲ್ಲು ಮೂಗು ತೂರಿಸೋದು ಆಡಳಿತದ ವೈಖರಿಯೇ ಇಲ್ಲ. ಖಂಡಿತವಾಗಿ ಇದು ತನಿಖೆ ಆಗಬೇಕು. ಸತ್ಯಾಸತ್ಯತೆ ಹೊರಗೆ ಬರಬೇಕು. ನಿಜವಾದರೆ ಇದು ಸರಕಾರ ತಲೆ ತಗ್ಗಿಸುವ ವಿಚಾರ ಎಂದರು.