ಮೈಸೂರು: ಮದುವೆಯಾಗಿ 12 ವರ್ಷವಾದರೂ ಹಣಕ್ಕಾಗಿ ಗಂಡ ಮತ್ತು ಆತನ ಮನೆಯವರು ಕಿರುಕುಳ ನೀಡುತ್ತಿದ್ದ ಪರಿಣಾಮ ಗೃಹಿಣಿ (House wife) ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜಗೂಡು ತಾಲೂಕಿನ ಹೊಸಕೋಟೆಯಲ್ಲಿ ನಡೆದಿದೆ. ವಿಜಯಲಕ್ಷ್ಮಿ (35) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಈಕೆ ನಂಜನಗೂಡು ತಾಲೂಕಿನ ಹೊಸಕೋಟೆಯ ಹರೀಶ್ ಎಂಬವರನ್ನು ಮದುವೆಯಾಗಿ 12 ವರ್ಷಗಳಾಗಿತ್ತು.
ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ವರದಕ್ಷಿಣೆ ಹಣಕ್ಕಾಗಿ ಗಂಡ ಹರೀಶ್, ಅತ್ತೆ ಮಲ್ಲಿಗಮ್ಮ, ಮಾವ ಮಹದೇವಮೂರ್ತಿ, ಮೈದುನರಾದ ರಾಘವೇಂದ್ರ ಮತ್ತು ಮಹೇಂದ್ರ ದಿನ ಪಿಡಿಸುತ್ತಿದ್ದರು. ಕಿರುಕುಳ ತಾಳಲಾರದೆ ಮನನೊಂದು ಇಬ್ಬರು ಮಕ್ಕಳನ್ನು ಬಿಟ್ಟು ಗಂಡನ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಲಕ್ಷ್ಮಿ ಅತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆ ಗಂಡ, ಅತ್ತೆ, ಮಾವ, ಮೈದುನರು ಪರಾರಿಯಾಗಿದ್ದಾರೆ.
ಕಿರುಕುಳ ಇದೇ ಮೊದಲಲ್ಲ: ವಿಜಯಲಕ್ಷ್ಮಿ ಪೋಷಕರು ಚಿನ್ನಾಭರಣ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆದರೆ ಗಂಡನ ಮನೆಯವರು ಮಾತ್ರ ಹಣಕ್ಕಾಗಿ ಆಕೆಯನ್ನು ದಿನ ಪಿಡಿಸುತ್ತಿದ್ದರು. ವರದಕ್ಷಿಣೆ ವಿಚಾರವಾಗಿ ಆಗಾಗ ಮನೆಯಲ್ಲಿ ಗಲಾಟೆ ನಡೆಯುತಿತ್ತು. ಈ ಹಿಂದೆಯೂ ಕೂಡ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಗಲಾಟೆ ವಿಚಾರವಾಗಿ ಹಲವು ಬಾರಿ ವಿಜಯಲಕ್ಷ್ಮಿ ದೂರು ನೀಡಿದ್ದರು. ಇದೀಗ 12 ವರ್ಷಗಳ ದಾಂಪತ್ಯ ಜೀವನದ ನಂತರ ಇಬ್ಬರು ಮಕ್ಕಳನ್ನು ಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.