ಗದಗ: ಉತ್ತರ ಕರ್ನಾಟಕದಲ್ಲಿ ರೈತರ ಹಬ್ಬವೆಂದೇ ಪ್ರಖ್ಯಾತಿ ಹೊಂದಿರೊ ಎಳ್ಳ ಅಮವಾಸ್ಯೆ ಹಬ್ಬವನ್ನ ಗದಗ ಜಿಲ್ಲೆಯಲ್ಲೂ ಸಹ ಸಡಗರ ಸಂಭ್ರಮದಿಂದ ವಿನೂತನವಾಗಿ ಆಚರಣೆ ಮಾಡಲಾಗಿದೆ.
ಹೊಸ ವರ್ಷಕ್ಕೆ ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾದ ಟೀಸರ್ ಔಟ್
ಗದುಗಿನ ಖ್ಯಾತ ವೈದ್ಯರುಗಳು, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪದಾಧಿಕಾರಿಗಳೆಲ್ಲಾ ಸೇರಿ ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಅನ್ನೋ ಘೋಷವಾಕ್ಯದೊಂದಿಗೆ ತಮ್ಮ ತಂಡದೊಂದಿಗೆ ಗದಗ ತಾಲೂಕಿನ ಬಳಗಾನೂರು ಗ್ರಾಮದ ಬಳಿ ಇರೋ IMA ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಗುರುಲಿಂಗಪ್ಪ ಬಿಡಿನಾಳ ಅವರ ಹೊಲದಲ್ಲಿ ಸೇರಿ ರೈತರೊಂದಿಗೆ ಎಳ್ಳ ಅಮವಾಸ್ಯೆ ಹಬ್ಬ ಆಚರಣೆ ಮಾಡಿದ್ದಾರೆ.
ಹಸಿರ ಸೀರೆಯುಟ್ಟು ತೆನೆತುಂಬಿ ಕಂಗೊಳಿಸ್ತಿದ್ದ ಭೂ ತಾಯಿಗೆ ಸೀಮಂತ ಕಾರ್ಯ ಮಾಡಿದ್ದಾರೆ. ಹೊಲದ ಮಧ್ಯದಲ್ಲಿ ಪಂಚ ಪಾಂಡವರನ್ನ, ಒಬ್ಬ ಕಳ್ಳನನ್ನ ಪ್ರತಿಷ್ಠಾಪಿಸಿ ವಿವಿಧ ಖಾದ್ಯಗಳ ಎಡೆ ಹಿಡಿದು ಹುಲ್ಲುಲಿಗೊ, ಸಾಳಂಬ್ರಿಗೋ ಅಂತಾ ಸುತ್ತು ಹಾಕಿ ಹೊಲದಮತುಂಬೆಲ್ಲಾ ಎಡೆ ಎರಚೋ ಮೂಲಕ ಶ್ರಧ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದ್ರು. ಒಳ್ಳೆಯ ಬಂಪರ್ ಬೆಳೆ ಬರಲಿ, ರೈತರು ಬೆಳೆದ ಬೆಳೆಗೆ ಒಳ್ಳೆಯ ದರ ಸಿಗಲಿ ಅಂತಾ ಬೇಡಿಕೊಂಡ್ರು. ತಮ್ಮ ಬಂಧು ಬಳಗ, ಆಪ್ತರು, ಗೆಳೆಯರನ್ನ ಹಬ್ಬಕ್ಕೆಂದು ಜಮೀನಿಗೆ ಆಮಂತ್ರಿಸಿ ಎಳ್ಳು ಹೋಳಿಗೆ, ಶೇಗಾ ಹೋಳಿಗೆ, ಎಣ್ಣೆ ಹೋಳಿಗೆ, ಉಂಡುಗಡುಬು, ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಚಪಾತಿ, ಎಣ್ಣೆಗಾಯಿ ಬದನೇಕಾಯಿ ಪಲ್ಯ, ಚವಳೇಕಾಯಿ ಪಲ್ಯ, ಹಸಿ ಮೆಣಸಿನಕಾಯಿ ಪಲ್ಯ, ಪುಂಡಿ ಪಲ್ಯ, ಶೇಂಗಾ ಹಿಂಡಿ, ಪುಟಾಣಿ ಚಟ್ನಿ, ಅನ್ನ, ಹೋಳಿಗೆ ಸಾರು, ಕಿಚಡಿ, ಸಂಡಿಗೆ ಸೇರಿದಂತೆ ತರಹೇವಾರಿ ಖಾದ್ಯಗಳ ಭೂರಿ ಭೋಜನವನ್ನ ಉಣಬಡಿಸೋ ಮೂಲಕ ಎಲ್ಲರೂ ಹಚ್ಚ ಹಸಿರಿನ ಸ್ವಚ್ಚಂದ ವಾತಾವರಣದಲ್ಲಿ ಖುಶಿ ಖುಶಿಯಿಂದ ಹಬ್ಬವನ್ನು ಆಚರಣೆ ಮಾಡಿದ್ರು. ದೇಶದ ಬೆನ್ನೆಲುಬಾದ ರೈತರಿಗೆ ಗೌರವ ಸಮರ್ಪಿಸಿದ್ರು. ಐದು ಜನ ಅನ್ನದಾತರಿಗೆ ಸನ್ಮಾನ ಮಾಡಿದ್ರು. ಜೊತೆಗೆ ಪ್ರತಿಯೊಬ್ನರೂ ಆರೋಗ್ಯವಾಗಿರಲು ನಿತ್ಯದ ವ್ಯಾಯಾಮದ ಜೊತೆಗೆ ಬಿಡುವಿನ ವೇಳೆಯಲ್ಲಿ ಜಮೀನಿನಲ್ಲಿ ಕೆಲಸ ಮಾಡೋ ಮೂಲಕ ಆರೋಗ್ಯಕರವಾದ ಜೀವನ ನಡೆಸಬಹುದಾಗಿದೆ. ಆ ನಿಟ್ಟಿನಲ್ಲಿ ಡಾ. ಬಿಡಿನಾಳ ಅವರ ಜೀವನ ಶೈಲಿ ಎಲ್ಲರಿಗೂ ಮಾದರಿಯಾಗಿದೆ ಅಂತಾ IMA ವೈದ್ಯರು ಹರ್ಷ ವ್ಯಕ್ತಪಡಿಸಿದ್ರು. ಜೈ ಜವಾನ್, ಜೈ ಕಿಸಾನ್ ಅನ್ನೋ ಘೋಷಣೆ ಕೂಗಿ ಅರ್ಥಪೂರ್ಣವಾಗಿ ರೈತರ ಹಬ್ಬ ಎಳ್ಳ ಅಮವಾಸ್ಯೆಯನ್ನ ಆಚರಣೆ ಮಾಡಿದ್ದಾರೆ.