ಬೆಂಗಳೂರು:- ನಗರದಲ್ಲಿ ಧೂಮಪಾನ ಮಾಡದ ಮಕ್ಕಳು, ಮಹಿಳೆಯರು ಮತ್ತು ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಕೋಟ್ಪಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಮಂಡಳಿ ಉಪಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ರಾಘವೇಂದ್ರ ಶೆಟ್ಟಿಗಾರ್* ರವರು ತಿಳಿಸಿದರು.
ನಗರದ ದಕ್ಷಿಣ ವಲಯ ಕಛೇರಿ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಕೋಟ್ಪಾ ಕಾಯ್ದೆ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಿ, ಕಾಯ್ದೆ ಉಲ್ಲಂಘಿಸುವವರ ವಿರುದ್ದ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದಿನ ಪೀಳಿಗೆಗೆ ಉತ್ತಮ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಕೈಜೋಡಿಸಬೇಕೆಂದು ಹೇಳಿದರು.
ಹಿರಿಯ ಪೋಲಿಸ್ ಅಧಿಕಾರಿಯಾದ ಶ್ರೀ ಬದ್ರಿನಾಥ್ ರವರು ಮಾತನಾಡಿ, ರಸ್ತೆ ಬದಿಯ ಸಣ್ಣ ಸಣ್ಣ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದರ ಮೇಲೆ ನಿಗಾವಹಿಸಿ ತಡೆಯಬೇಕು. ಹುಕ್ಕಾಬಾರ್, ಬಾರ್ ಮತ್ತು ರೆಸ್ಟೊರೆಟ್, ತಂಬಾಕು ಉತ್ಪನ್ನ ಮಾರಾಟಗಾರರು ಕಾಯ್ದೆ ಉಲ್ಲಂಘಿಸಿರುವ ವಿರುದ್ದ ಕ್ರಮ ಜರುಗಿಸಬೇಕೆಂದು ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಕಾರ್ಯಕ್ರಮ ಅಧಿಕಾರಿ ಡಾ|| ಕುಮಾರ್, ಆರೋಗ್ಯಾಧಿಕಾರಿ ಮಾತನಾಡಿ, ಶಾಲಾ-ಕಾಲೇಜು ಪಕ್ಕದಲ್ಲಿ ತಂಬಾಕು ಮಾರಾಟ ಮಾಡದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕಾಯ್ದೆ ಉಲ್ಲಂಘನೆ ಮಾಡುವ ಕಡೆ ಪಾಲಿಕೆ ಆರೋಗ್ಯಾಧಿಕಾರಿಗಳು ಪೊಲೀಸ್ ಸಹಯೋಗದೊಂದಿಗೆ ಭೇಟಿ ನೀಡಿ ತಪಾಸಣೆ ನಡೆಸಿ ದಂಡ ವಿಧಿಸಲಾಗುವುದೆಂದು ತಿಳಿಸಿದರು
ಕಾರ್ಯಗಾರದಲ್ಲಿ ದಕ್ಷಿಣ ವಲಯ ಆರೋಗ್ಯಾಧಿಕಾರಿ ಡಾ. ಕಲ್ಪನಾ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಕಾರ್ಯಕ್ರಮ ಅಧಿಕಾರಿ ಡಾ|| ಕುಮಾರ್, ಆರೋಗ್ಯಾಧಿಕಾರಿಗಳು, ಪೋಲಿಸ್, ಅಭಕಾರಿ, ಶಿಕ್ಷಣ ಇಲಾಖೆ, ಆಹಾರ ಮತ್ತು ಸುರಕ್ಷಾತ ಕಾನೂನು ಮಾಪನ ಶಾಸ್ತç ಇಲಾಖೆಯ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.