ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಕುಲ್ಗಾಮ್ (Kulgam) ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆ (Security Force) ಎನ್ಕೌಂಟರ್ (Encounter) ನಡೆಸಿದ್ದು, ಐವರು ಲಷ್ಕರ್ ಭಯೋತ್ಪಾದಕರನ್ನು (Lashkar Terrorists) ಹತ್ಯೆ ಮಾಡಲಾಗಿದೆ. ಐವರು ಭಯೋತ್ಪಾದಕರನ್ನು ಕುಲ್ಗಾಮ್ ಪೋಲೀಸ್, ಸೇನೆ ಮತ್ತು ಸಿಆರ್ಪಿಎಫ್ ತಟಸ್ಥಗೊಳಿಸಿದೆ. ಭಯೋತ್ಪಾದಕರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಭಯೋತ್ಪಾದಕರು ತಪ್ಪಿಸಿಕೊಳ್ಳದಂತೆ ಭದ್ರತಾ ಪಡೆ ಪ್ರದೇಶವನ್ನು ಸುತ್ತುವರೆದಿದೆ. ಕುಲ್ಗಾಮ್ನ ದಮ್ಹಾಲ್ ಹಂಜಿ ಪೋರಾ ಪ್ರದೇಶದಲ್ಲಿ ಎನ್ಕೌಂಟರ್ ಆರಂಭವಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ಎಕ್ಸ್ನಲ್ಲಿ ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ನಂತರ ಭದ್ರತಾ ಪಡೆ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರಿಂದ ಶೋಧ ಕಾರ್ಯಾಚರಣೆ ಗುಂಡಿನ ಚಕಮಕಿಯಾಗಿ ಮಾರ್ಪಟ್ಟಿದೆ. ಕುಲ್ಗಾಮ್ನ ನೆಹಮಾ ಪ್ರದೇಶದ ಸಾಮ್ನೋದಲ್ಲಿ ಶುಕ್ರವಾರ ಮುಂಜಾನೆ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.