ಪವನ್ ಕಲ್ಯಾಣ್ ನಟನೆಯ ‘ಓಜಿ’ ಚಿತ್ರದ ಮೂಲಕ ಬಾಲಿವುಡ್ ನಟ ಇಮ್ರಾನ್ ಹಶ್ಮಿ ದಕ್ಷಿಣ ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ. ಇಮ್ರಾನ್ ಹಶ್ಮಿ ಬರ್ತಡೇ ಪ್ರಯುಕ್ತ ಓಜಿ ಚಿತ್ರದ ಇಮ್ರಾನ್ ಹಶ್ಮಿ ಲುಕ್ ರಿಲೀಸ್ ಮಾಡಲಾಗಿದೆ. ಹಿಂದಿಯ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಹಶ್ಮಿ ತೆಲುಗಿನ ಮೊದಲ ಸಿನಿಮಾದಲ್ಲೇ ಪವನ್ ಕಲ್ಯಾಣ್ ಮುಂದೆ ಅಬ್ಬರಿಸಲಿದ್ದಾರೆ.
ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡು ಚಿತ್ರ ತಯಾರಕರು, “ಹ್ಯಾಪಿ ಬರ್ತ್ಡೇ ಡೆಡ್ಲಿಯೆಸ್ಟ್ OMI BHAU ಇಮ್ರಾನ್ ಹಶ್ಮಿ” ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್ನಲ್ಲಿ, ಇಮ್ರಾನ್ ಹಶ್ಮಿ ಸಿಗರೇಟ್ ಸೇದುತ್ತಿದ್ದು, ಹಣೆಯ ಮೇಲೆ ಗಾಯದ ಗುರುತಿದೆ. ಸಾಕಷ್ಟು ಒರಟಾಗಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡ ತಯಾರಕರು ‘OMI BHAU’ ಎನ್ನುವ ಮೂಲಕ ಇಮ್ರಾನ್ ಹಶ್ಮಿ ನಿರ್ವಹಿಸುತ್ತಿರುವ ಪಾತ್ರದ ಹೆಸರನ್ನು ರಿವೀಲ್ ಮಾಡಿದ್ದಾರೆ.
ಇಮ್ರಾನ್ ಹಶ್ಮಿ ದಕ್ಷಿಣ ಚಿತ್ರರಂಗದ ತಮ್ಮ ಚೊಚ್ಚಲ ಸಿನಿಮಾದ ಪಾತ್ರದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದಾರೆ. “ಓಜಿಯೊಂದಿಗೆ ದಕ್ಷಿಣ ಭಾರತದ ಸಿನಿ ಮಾರುಕಟ್ಟೆಯಲ್ಲಿ ಹೊಸ ಹಾದಿಯನ್ನು ಪ್ರಾರಂಭಿಸಲು ನಾನು ಬಹಳ ಉತ್ಸುಕನಾಗಿದ್ದೇನೆ. ಚಿತ್ರವು ಶಕ್ತಿಯುತ ಮತ್ತು ಆಕರ್ಷಕ ನಿರೂಪಣಾ ಶೈಲಿಯನ್ನು ಹೊಂದಿದೆ. ಸಿನಿಮಾ ನನಗೆ ಸವಾಲಿನ ಪಾತ್ರವನ್ನು ಒದಗಿಸಿದೆ. ಪವನ್ ಕಲ್ಯಾಣ್ ಸರ್, ಸುಜೀತ್, ದಾನಯ್ಯ ಸರ್ ಮತ್ತು ಸಂಪೂರ್ಣ ತಂಡದೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಸಿನಿಪ್ರಿಯರಿಗೆ ಸ್ಮರಣೀಯ ಸಿನಿಮೀಯ ಅನುಭವ ನೀಡುವ ವಿಶ್ವಾಸ ನಮಗಿದೆ” ಎಂದು ಹಶ್ಮಿ ಹೇಳಿದ್ದಾರೆ.
ಬಹುನಿರೀಕ್ಷಿತ ಚಿತ್ರವನ್ನು ಸುಜೀತ್ ಬರೆದು ನಿರ್ದೇಶಿಸುತ್ತಿದ್ದಾರೆ. ಡಿವಿವಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ಡಿವಿವಿ ದಾನಯ್ಯ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಚಿತ್ರೀಕರಣವನ್ನು ಮುಂಬೈನಲ್ಲಿ ನಡೆಸಲಾಗಿದೆ. ಹಶ್ಮಿ ಮತ್ತು ಕಲ್ಯಾಣ್ ಹೊರತುಪಡಿಸಿ, ಚಿತ್ರದಲ್ಲಿ ಪ್ರಕಾಶ್ ರಾಜ್ ಮತ್ತು ಶ್ರೀಯಾ ರೆಡ್ಡಿ ಸೇರಿದಂತೆ ಮತ್ತಿತರರು ಬಣ್ಣ ಹಚ್ಚಿದ್ದಾರೆ.