ಮೈಸೂರು:- ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಡ್ಡಾಯ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮೈಸೂರು ಹಾಗೂ ಸುತ್ತಮುತ್ತ ಸ್ಥಾಪಿಸಿರುವ ಕಾರ್ಖಾನೆಗಳಲ್ಲಿ ತಾಂತ್ರಿಕ ನೈಪುಣ್ಯ ಇರುವವರು ಸಿಗದಿದ್ದಾಗ ಮಾತ್ರ ಹೊರಗಿನವರಿಗೆ ಅವಕಾಶ ಕೊಡಬೇಕು. ಇದರ ಹೊರತಾಗಿ ಸ್ಥಳೀಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು ಎಂದರು.
ಕಾರ್ಖಾನೆಗಳಲ್ಲಿ ಉದ್ಯೋಗ ಸ್ಥಳೀಯರಿಗೆ ಸಿಗಬೇಕು. ಮಾನವ ಸಂಪನ್ಮೂಲ ನಮ್ಮಲ್ಲಿ ಇದೆ. ವೃತ್ತಿ ನೈಪುಣ್ಯ ಇರುವವರೂ ನಮ್ಮಲ್ಲಿ ಇದ್ದಾರೆ. ಹೀಗಾಗಿ ಸುಳ್ಳು ಕಾರಣ ಕೊಟ್ಟು ಸ್ಥಳೀಯರಿಗೆ ಉದ್ಯೋಗ ಅವಕಾಶ ನಿರಾಕರಿಸಬಾರದು ಎಂದು ತಿಳಿಸಿದರು.
ಕಾರ್ಖಾನೆಗಳು ಶಾಂತಿಯುತವಾಗಿ ನಡೆಯಬೇಕು. ನಮ್ಮ ಸರ್ಕಾರ ನಿರುದ್ಯೋಗಿ ಪದವೀಧರರಿಗಾಗಿ ಯುವ ನಿಧಿ ಯೋಜನೆ ಜಾರಿಗೆ ತರುತ್ತಿದೆ. ಯೋಜನೆ ಜನವರಿ 12ರಂದು ಉದ್ಘಾಟನೆಯಾಗಲಿದೆ. ನಿಮಗೆ ಯಾವ ರೀತಿಯ ವೃತ್ತಿ ನೈಪುಣ್ಯತೆ ಇರುವವರು ಬೇಕು ಎಂಬುದನ್ನು ಮನಗಂಡು ಪದವೀಧರರಿಗೆ ಸರ್ಕಾರದ ವತಿಯಿಂದ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಕಾರ್ಖಾನೆಗಳಿಂದ ರಾಜ್ಯದ ಅಭಿವೃದ್ಧಿ ಆಗುತ್ತದೆ. ಜಿಡಿಪಿ ಬೆಳವಣಿಗೆಗೂ ಇದು ಸಹಕಾರಿ. ಕಾರ್ಖಾನೆಗಳಿಗೆ ಜಮೀನು ನೀಡಿದ ಮಾಲೀಕರ ಕುಟುಂಬದವರಿಗೆ ಪ್ರಮುಖವಾಗಿ ಉದ್ಯೋಗ ನೀಡಬೇಕು. ಸ್ಥಳೀಯರಿಗೆ ಆದ್ಯತೆ ಸಿಗಲೇಬೇಕು. ಒಂದು ವೇಳೆ ವೃತ್ತಿ ನೈಪುಣ್ಯತೆ ಇಲ್ಲದಿದ್ದರೆ ತರಬೇತಿ ನೀಡಿ ನೇಮಕ ಮಾಡಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು