ವಾಷಿಂಗ್ಟನ್: ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸಕ್ಕೆ ತೆರಳಿದ್ದು ಈ ವೇಳೆ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿದ್ದಾರೆ. ಈ ಬೆನ್ನಲ್ಲೇ ಇದೀಗ ಮಹತ್ವದ ಬೆಳವಣಿಗೆಗಳು ನಡೆದಿದ್ದು, ಮಸ್ಕ್ ನೇತೃತ್ವದ ಟೆಸ್ಲಾ ಕಂಪನಿ ಮುಂದಿನ ಏಪ್ರಿಲ್ ವೇಳೆಗೆ ಭಾರತದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳನ್ನ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ರೆಡಿಯಾಗಿದೆ.
ಮೂಲಗಳ ಪ್ರಕಾರ, ಟೆಸ್ಲಾ ಕಂಪನಿಯು ತನ್ನ ಬರ್ಲಿನ್ ಪ್ಲ್ಯಾಂಟ್ನಿಂದ ಎಲೆಕ್ಟ್ರಿಕ್ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಈಗಾಗಲೇ ಶೋರೂಮ್ಗಾಗಿ ಮುಂಬೈನ ಬಾಂದ್ರಾದಲ್ಲಿ ಮತ್ತು ದೆಹಲಿಯ ಏರೋಸಿಟಿಯಲ್ಲಿ ಸ್ಥಳಗಳನ್ನು ಗುರುತಿಸಲಾಗಿದೆ. ಆದ್ರೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವ ಯಾವುದೇ ಯೋಜನೆಯನ್ನ ಟೆಸ್ಲಾ ಸದ್ಯಕ್ಕೆ ಹೊಂದಿಲ್ಲ ಎನ್ನಲಾಗುತ್ತಿದೆ.
ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಲು ಮುಂದಾಗಿರುವ ಟೆಸ್ಲಾ 25,000 ಡಾಲರ್ (ಸುಮಾರು 22 ಲಕ್ಷ ರೂ.) ಆರಂಭಿಕ ಬೆಲೆಯಿಂದ ಮಾರಾಟ ಪ್ರಾರಂಭಿಸಲು ಪ್ಲ್ಯಾನ್ ಮಾಡಿದೆ. ಇದರೊಂದಿಗೆ 2025ರ ಅಂತ್ಯದ ವೇಳೆಗೆ 1 ಶತಕೋಟಿ ವಹಿವಾಟು ನಡೆಸುವ ಗುರಿ ಹೊಂದಿದೆ ಎಂದು ತಿಳಿದು ಬಂದಿದೆ.
ಅಮೆರಿಕದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಅವರ ಭೇಟಿ ಬಳಿಕ, ಟೆಸ್ಲಾ ಆಟೋಮೊಬೈಲ್ ಸಂಸ್ಥೆಯು ಭಾರತದಲ್ಲಿ ನೇಮಕಾತಿಯನ್ನು ಆರಂಭಿಸಿದೆ. ಟೆಸ್ಲಾ ಕಂಪನಿಯು ಗ್ರಾಹಕ ಸಂಪರ್ಕ ಮತ್ತು ಆಡಳಿತ ಸೇರಿದಂತೆ ಒಟ್ಟು 13 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.