ಸ್ಯಾಂಡಲ್ ವುಡ್ ಅಂಗಳದಲ್ಲೀಗ ಜೋಗಪ್ಪನ ಸದ್ದು ಜೋರಾಗಿದೆ. ಅನೇಕ ಹಿಟ್ ಧಾರಾವಾಹಿಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ನಿರ್ದೇಶಕ ಹಯದವನ ಚೊಚ್ಚಲ ಪ್ರಯತ್ನದ ಎಲ್ಲೋ ಜೋಗಪ್ಪ ನಿನ್ನರಮನೆ ಪ್ರೇಕ್ಷಕರ ಎದುರು ಬರಲು ಕೆಲ ದಿನಗಳಷ್ಟೇ ಬಾಕಿ ಇದೆ. ಬಿಡುಗಡೆಗೆ ಸಜ್ಜಾಗಿರುವ ಚಿತ್ರತಂಡ ಭರದಿಂದ ಪ್ರಚಾರ ಕೂಡ ನಡೆಸುತ್ತಿದೆ. ಇದೇ ತಿಂಗಳ 21ಕ್ಕೆ ತೆರೆಗೆ ಬರ್ತಿರುವ ಸಿನಿಮಾ ಬಗ್ಗೆ ಚಿತ್ರತಂಡ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದೆ. ನಿನ್ನೆ ಬೆಂಗಳೂರಿನ ಎಸ್ ಆರ್ ವಿ ಥಿಯೇಟರ್ ನಲ್ಲಿ ಸುದ್ದಿಗೋಷ್ಟಿ ಆಯೋಜಿಸಲಾಗಿತ್ತು.
ಈ ವೇಳೆ ನಿರ್ದೇಶಕ ಹಯದವನ ಮಾತನಾಡಿ, ಎಲ್ಲೋ ಜೋಗಪ್ಪ ನಿನ್ನರಮನೆ ಹುಡುಕಾಟದ ಕಥೆ. ಟ್ರೇಲರ್ ನಲ್ಲಿ ಒಂದು ಡೈಲಾಗ್ ಬರುತ್ತದೆ. ಎಲ್ಲರೂ ದುಡ್ಡಿಗೋಸ್ಕರ ಏನೂ ಮಾಡ್ತಿದ್ದೀಯಾ ಅಂತಾ ಕೇಳ್ತಾರೆ. ನಿನ್ನ ಖುಷಿಗೋಸ್ಕರ ಏನೂ ಮಾಡ್ತಿದ್ದೀಯಾ ಎಂದು ಕೇಳಲ್ಲ. ಈ ಸಂದರ್ಭದಲ್ಲಿ ಈ ಡೈಲಾಗ್ ನ್ನು ನನ್ನ ಜೀವನಕ್ಕೆ ಕನೆಕ್ಟ್ ಮಾಡಿಕೊಳ್ಳುತ್ತೇನೆ. ನನ್ನ ಖುಷಿ, ಫ್ಯಾಷನ್ ಗೋಸ್ಕರ ಸಿನಿಮಾಕ್ಕೆ ಬಂದಿದ್ದೇನೆ. ಇಷ್ಟು ವರ್ಷಗಳ ಟಿವಿ ಜರ್ನಿ ನಂತರ. ಒಬ್ಬ ನಿರ್ದೇಶಕನಾಗಿ ಸಿನಿಮಾ ನಮಗೆಲ್ಲಾ ಕನಸಾಗಿ ಉಳಿದಿರುತ್ತದೆ. ಮನೆಯಿಂದ ಬ್ಯಾಗ್ ಹಿಡಿದು ಹೊರಟಾಗ ಸಿನಿಮಾ ಮಾಡಲು ಹೊರಟಿರುತ್ತೇವೆ. ಟಿವಿ ಅವಕಾಶ, ಅನ್ನ ನೆಲೆ ಕೀರ್ತಿ ಎಲ್ಲವನ್ನೂ ಕೊಡ್ತು. ಸಿನಿಮಾ ಕನಸು ಆಸೆಯಾಗಿ ಉಳಿಯುತ್ತದೆ. ಆ ನಿಟ್ಟಿನಲ್ಲಿ ಹುಟ್ಟಿಕೊಂಡ ಕಥೆ ಎಲ್ಲೋ ಜೋಗಪ್ಪ ನಿನ್ನರಮನೆ. ಜರ್ನಿ ಸಿನಿಮಾ ಗೆದ್ದಿರುವ ಉದಾಹರಣೆ. ಚಾರ್ಲಿ ಸದ್ಯದ ಉದಾಹರಣೆ. ಹೀಗಾಗಿ ಆ ಕಾನ್ಸೆಪ್ಟ್ ನಲ್ಲಿ ಚಿತ್ರ ಮಾಡಿದ್ದೇವೆ.
ನಟ ಅಂಜನ್ ನಾಗೇಂದ್ರ ಮಾತನಾಡಿ, ಎಲ್ಲೋ ಜೋಗಪ್ಪ ನಿನ್ನರಮನೆ ನನ್ನ ಎರಡನೇ ಹೆಜ್ಜೆ. ಎಲ್ಲರೂ ಕುಳಿತು ನೋಡುವ ಸಿನಿಮಾವಾಗಬೇಕು ಎಂಬ ಉದ್ದೇಶದಿಂದ ಈ ಚಿತ್ರ ಒಪ್ಪಿಕೊಂಡಿದ್ದೇನೆ. ನಟನಾಗಿ ಬೇರೆ ಬೇರೆ ಪಾತ್ರ ಮಾಡಬೇಕು ಎಂಬ ಕನಸು ಇರುತ್ತದೆ. ಅದರಂತೆ ಎಲ್ಲೋ ಜೋಗಪ್ಪ ನಿನ್ನರಮನೆ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾನೆ. ದೊಡ್ಡ ದೊಡ್ಡ ತಾರಾಬಳಗದ ಜೊತೆ ಕೆಲಸ ಮಾಡಿದ್ದು ಸಾಕಷ್ಟು ಖುಷಿ ಇದೆ. ಇದೇ 21ರಂದು ಎಲ್ಲೋ ಜೋಗಪ್ಪ ನಿನ್ನರಮನೆ ತೆರೆಗೆ ಬರ್ತಿದೆ. ನಿಮ್ಮ ಬೆಂಬಲ ಇರಲಿ ಎಂದು ತಿಳಿಸಿದರು.
ಕಂಬ್ಳಿಹುಳ ಖ್ಯಾತಿಯ ಅಂಜನ್ ನಾಗೇಂದ್ರ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ವೆನ್ಯಾ ರೈ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಸಂಜನಾ ದಾಸ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಶರತ್ ಲೋಹಿತಾಶ್ವ, ದಾನಪ್ಪ, ದಿನೇಶ್ ಮಂಗಳೂರು, ಸ್ವಾತಿ ಬಿರಾದಾರ್, ಲಕ್ಷ್ಮಿ, ನಾಡಗೌಡ, ರೇಖಾ ರಾವ್, ಇಳಾ ವಿಟ್ಲ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅಗ್ನಿ ಸಾಕ್ಷಿ, ನಾಗಿಣಿಯಂಥಾ ಧಾರಾವಾಹಿಗಳಿಗೆ ಆಕ್ಷನ್ ಕಟ್ ಹೇಳಿರುವ ಹಯವದನ ಎಲ್ಲೋ ಜೋಗಪ್ಪ ನಿನ್ನರಮನೆ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಪವನ್ ಶಿಮಿಕೇರಿ ಮತ್ತು ಸಿಂಧು ಹಯವದನ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಟರಾಜು ಮದ್ದಾಲ ಛಾಯಾಗ್ರಹಣ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ, ಶಿವಪ್ರಸಾದ್ ಸಂಗೀತ ನಿರ್ದೇಶನದಲ್ಲಿ ಚಿತ್ರ ತಯಾರಾಗಿದೆ. ಸುಂದರ ಜರ್ನಿ ಜೊತೆಗೆ ಅಪ್ಪ ಮಗನ ಬಾಂಧವ್ಯದ ಕಥೆ ಹೊಂದಿರುವ ಎಲ್ಲೋ ಜೋಗಪ್ಪ ನಿನ್ನರಮನೆ ಇದೇ ಶುಕ್ರವಾರ ತೆರೆಗೆ ಬರ್ತಿದೆ.