ಬೆಂಗಳೂರು:- ಕರ್ನಾಟಕದಲ್ಲಿ ವಿದ್ಯುತ್ ಕೊರತೆ ಇಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಸಮಸ್ಯೆ ಇಲ್ಲ. ನಿರ್ವಹಣೆಗಾಗಿ ರಾಜ್ಯದಲ್ಲಿನ ಕೆಲವು ವಿದ್ಯುತ್ ಘಟಕಗಳನ್ನು ಮುಂಗಾರು ಸಮಯದಲ್ಲಿ ಮುಚ್ಚಲಾಗಿತ್ತು.
ಹೀಗಾಗಿ ಅಲ್ಪಕಾಲದ ಪವರ್ ಕಟ್ ಉಂಟಾಗಿತ್ತು. ಆದರೆ ಈ ಕೊರತೆಯನ್ನು ನಾವು ನೀಗಿಸಿದ್ದೇವೆ. ರೈತರು ಬೇಡಿಕೆ ಇಟ್ಟಾಗೆಲ್ಲಾ ನಾವು ಅವರಿಗೆ ವಿದ್ಯುತ್ ಪೂರೈಕೆ ಮಾಡಿದ್ದೇವೆ. ಈಗ ಯಾವುದೇ ದೂರುಗಳಿಲ್ಲ. 5ರಿಂದ 10 ದಿನಗಳ ಕಾಲ ಮಾತ್ರ ವಿದ್ಯುತ್ ಕೊರತೆ ಉಂಟಾಗಿತ್ತು. ಆದರೆ ಅನಾವಶ್ಯಕವಾಗಿ ಈ ಬಗ್ಗೆ ರಾಜಕೀಯ ಮಾಡಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ವಿದ್ಯುತ್ ಕೊರತೆ ನೀಗಿಸಲು ಹೆಚ್ಚಿನ ಘಟಕಗಳ ಸ್ಥಾಪನೆ ಮಾಡಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಎಲ್ಲವನ್ನೂ ಮಾಡಿದೆ ಎಂದು ಹೇಳಿದರು.